ADVERTISEMENT

‘ಸಸಿ ಪೋಷಿಸಿ ಪರಿಸರ ರಕ್ಷಿಸಿ’

​ಪ್ರಜಾವಾಣಿ ವಾರ್ತೆ
Published 20 ಮೇ 2019, 13:43 IST
Last Updated 20 ಮೇ 2019, 13:43 IST
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಸಸಿಗಳಿಗೆ ಟ್ಯಾಂಕರ್‌ಗಳ ಮೂಲಕ ಯುವ ಮುಖಂಡರು ನೀರು ಹಾಯಿಸಿದರು
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಸಸಿಗಳಿಗೆ ಟ್ಯಾಂಕರ್‌ಗಳ ಮೂಲಕ ಯುವ ಮುಖಂಡರು ನೀರು ಹಾಯಿಸಿದರು   

ವಿಜಯಪುರ: ‘ಪ್ರತಿಯೊಬ್ಬ ಯುವಕರು ಪರಿಸರ ಸಂರಕ್ಷಣೆಗೆ ಮುಂದೆ ಬರಬೇಕು. ಭವಿಷ್ಯದ ಪ್ರಜೆಗಳಿಗೆ ಬೇಕಾಗಿರುವ ಉತ್ತಮ ಪರಿಸರವನ್ನು ನಿರ್ಮಾಣ ಮಾಡಿಕೊಡುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದು ಮುಖಂಡ ರವಿಕುಮಾರ್ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನೆಟ್ಟಿರುವ ಸಸಿಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಹಾಯಿಸಿ ಅವರು ಮಾತನಾಡಿದರು.

‘ಗಿಡಮರಗಳನ್ನು ಕಡಿದು ನಗರೀಕರಣ ಮಾಡಲು ಮುಂದಾಗಿರುವುದರ ಪರಿಣಾಮವಾಗಿ ಇಂದು ತಾಪಮಾನದ ಏರುತ್ತಿದೆ. ಅಲ್ಲದೆ, ನೀರಿನ ಕೊರತೆಯನ್ನು ಎದುರಿಸುವಂತಾಗಿದೆ. ತಾಪಮಾನದ ಏರಿಕೆಯಿಂದಾಗಿ ಎದುರಿಸುತ್ತಿರುವ ಹವಾಮಾನ ವೈಪರೀತ್ಯಗಳನ್ನು ತಡೆಗಟ್ಟಬೇಕಾದರೆ ಹೆಚ್ಚು ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕಾಗಿರುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದು ತಿಳಿಸಿದರು.

ADVERTISEMENT

‘ಇರುವ ಸಸಿಗಳಿಗೆ ನೀರು ಹಾಯಿಸುವ ಮೂಲಕ ಮರಗಳನ್ನಾಗಿ ಮಾಡಿದರೆ, ಭವಿಷ್ಯದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ಸಾಮೂಹಿಕವಾಗಿ ಜನರ ಸಹಭಾಗಿತ್ವ ಅಗತ್ಯವಾಗಿದೆ’ ಎಂದರು.

ಯುವ ಮುಖಂಡ ಪ್ರಸನ್ನಕುಮಾರ್ ಮಾತನಾಡಿ, ಹಳ್ಳಿಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ಸಸಿ ನೆಡಲು ಅವಕಾಶಗಳಿವೆ. ಸರ್ಕಾರದ ಎಲ್ಲ ಯೋಜನೆಗಳಲ್ಲೂ ಅವಕಾಶಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಸಿಗಳನ್ನು ನೆಡುವುದಷ್ಟೆ ಅಲ್ಲದೇ ಕೆರೆ ಕುಂಟೆಗಳಲ್ಲಿನ ಹೂಳು ತೆಗೆದು ಮಳೆಯ ನೀರನ್ನು ಸಂಗ್ರಹಿಸಿ ಅಂತರ್ಜಲದ ಮಟ್ಟವನ್ನು ಏರಿಕೆ ಮಾಡಬೇಕು. ಇದರಿಂದ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು. ಯುವ ಮುಖಂಡ ಪ್ರದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.