ADVERTISEMENT

ಬರ ಪ್ರದೇಶದಲ್ಲಿ ಮೇವು ಬ್ಯಾಂಕ್‌ ತೆರೆಯಿರಿ

ಹುಲ್ಲಿನ ಬೆಲೆ ಏರಿಕೆ * ಟೆಂಪೊಗಳಲ್ಲಿ ತಂದು ಒಣ ಮೇವು ಮಾರಾಟ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 13:26 IST
Last Updated 7 ಜನವರಿ 2019, 13:26 IST
ವಿಜಯಪುರದಲ್ಲಿ ಮಾರಾಟಕ್ಕೆ ತಂದಿರುವ ರಾಗಿ ಹುಲ್ಲು
ವಿಜಯಪುರದಲ್ಲಿ ಮಾರಾಟಕ್ಕೆ ತಂದಿರುವ ರಾಗಿ ಹುಲ್ಲು   

ವಿಜಯಪುರ: ತೀವ್ರ ಮಳೆ ಕೊರತೆಯಿಂದ ಕುಡಿಯುವ ನೀರು ಮಾತ್ರವಲ್ಲದೆ ದನಕರುಗಳ ಮೇವಿಗೂ ಹಾಹಾಕಾರ ಉಂಟಾಗಿದ್ದು, ಹುಲ್ಲಿನ ಬೆಲೆ ಗಗನಕ್ಕೇರಿದೆ. ಮೇವಿನ ಬೆಳೆಗಳಾದ ರಾಗಿ, ಜೋಳ, ಅವರೆ ಮುಂತಾದ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಆಗದ ಕಾರಣ ಈ ಬಾರಿ ರಾಗಿ ಹುಲ್ಲಿಗೆ ಬೇಡಿಕೆ ಹೆಚ್ಚಾಗಿದೆ.

ಆಂಧ್ರಪ್ರದೇಶದ ಹಿಂದೂಪುರ, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು, ಬಾಗೇಪಲ್ಲಿ ಮುಂತಾದ ಕಡೆಗಳಿಂದ ರಾಗಿ ಹುಲ್ಲು ಖರೀದಿಸಿ ತಂದು ಟೆಂಪೊಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಒಂದು ಕಟ್ಟು ರಾಗಿ ಹುಲ್ಲಿನ ಬೆಲೆ ₹80ರಿಂದ 100 ರೂಪಾಯಿಗೆ ಮಾರಾಟ ಮಾಡುವಾಗುತ್ತಿದೆ ಇದರಿಂದ ಸಾಮಾನ್ಯ ರೈತರು ಸಂಪಾದನೆ ಮಾಡಿದ ಹಣವನ್ನು ಮೇವು ಖರೀದಿಗೆ ವೆಚ್ಚ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತ ಆಂಜಿನಪ್ಪ ಮಾತನಾಡಿ,‘ರಾಗಿ ಹುಲ್ಲಿಗೆ ಒಂದು ಕಟ್ಟಿಗೆ ₹100 ರೂಪಾಯಿ ಇದೆ. ದಿನಕ್ಕೆ ಐದರಿಂದ ಆರು ಕಟ್ಟು ಬೇಕಾಗುತ್ತವೆ. ₹600ರೂಪಾಯಿ ಕೊಟ್ಟು ಹುಲ್ಲು ಖರೀದಿಸಿದರೂ ಸಾಕಾಗುತ್ತಿಲ್ಲ. ಹಸಿರು ಮೇವೂ ಸಿಗುತ್ತಿಲ್ಲ. ಒಣಹುಲ್ಲು ಖರೀದಿಸದಿದ್ದರೆ ಹೈನುಗಾರಿಕೆಗೆ ಪೆಟ್ಟು ಬೀಳುತ್ತದೆ. ಹಸಿರು ಮೇವು ಕೊಡದಿದ್ದರೆ ಹಾಲಿನ ಉತ್ಪಾದನೆಯೂ ಕಡಿಮೆಯಾಗುತ್ತದೆ. ಇದರಿಂದ ರೈತರ ಆರ್ಥಿಕ ಪ್ರಗತಿಗೆ ತೊಡಕಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಮೇವಿನ ಬ್ಯಾಂಕ್‌ ತೆರೆಯಲು ಮನವಿ: ಒಣಮೇವು ಒಂದು ಲೋಡ್‌ ಖರೀದಿಸಬೇಕಾದರೆ ₹8 ಸಾವಿರ ವ್ಯಯವಾಗುತ್ತದೆ. ಹಸಿ ಮೇವಿಗೆ ₹17ಸಾವಿರ ವ್ಯಯವಾಗುತ್ತದೆ. ಒಂದೇ ಸಲ ಲೋಡ್‌ ಖರೀದಿಸಿದರೆ ಬೂಸ್ಟ್ ಬರುತ್ತದೆ. ನಾಲ್ಕೈದು ಮಂದಿ ರೈತರು ಸೇರಿ ಹಸಿರು ಮೇವು ಖರೀದಿ ಮಾಡಬೇಕು. ಸಣ್ಣ, ಮಧ್ಯಮ ವರ್ಗದ ರೈತರು ಬಂಡವಾಳ ಹಾಕಿ ಮೇವು ಖರೀದಿಸಿ ರಾಸುಗಳನ್ನು ಸಾಕುವುದು ಕಷ್ಟದ ಕೆಲಸವಾಗಿದೆ. ಸರ್ಕಾರ, ಬರಪೀಡಿತ ಪ್ರದೇಶಗಳಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆದರೆ ದನಕರುಗಳಿಗೆ ಉಪಯೋಗವಾಗುವುದರ ಜತೆಗೆ ಬಡ ರೈತರು ದುಬಾರಿ ಹಣ ಕೊಟ್ಟು ಮೇವು ಖರೀದಿಸುವುದು ತಪ್ಪುತ್ತದೆ ಎಂದರು.

ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಉಪ ವ್ಯವಸ್ಥಾಪಕ ಗಂಗಯ್ಯ ಮಾತನಾಡಿ, ‘ಸದ್ಯಕ್ಕೆ ಹಾಲಿನ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮೇವಿನ ಕೊರತೆ ಉಂಟಾದರೂ ಸಹ ಪಶುಗಳಿಗೆ ಕೊಡುವ ಆಹಾರ ಪೂರೈಕೆ ಮಾಡುವ ಮೂಲಕ ಮೇವಿನ ಕೊರತೆ ಸರಿದೂಗಿಸುವ ಪ್ರಯತ್ನ ನಡೆದಿದೆ. ಏಪ್ರಿಲ್ – ಮೇ ತಿಂಗಳಿನಲ್ಲಿ ಹಾಲಿನ ಉತ್ಪಾದನೆಯಲ್ಲಿ ಕೊಂಚ ಏರುಪೇರಾಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.