
ವಿಜಯಪುರ(ದೇವನಹಳ್ಳಿ): ‘ದುಡಿಯಲು ಶಕ್ತಿಯೂ ಇಲ್ಲ. ನನಗೆ ಯಾರ ಆಸರೆಯೂ ಇಲ್ಲ. ಕಳೆದ ಮೂರು ತಿಂಗಳಿಂದ ವೃದ್ಧಾಪ್ಯ ಮಾಸಾಶನ ಬಾರದೆ ಪರದಾಡುತ್ತಿದ್ದೇನೆ...’
ಇದು 86 ವರ್ಷದ ಮುನಿಶಾಮಪ್ಪ ಅಳಲು.
ಮಂಡಿಬೆಲೆ ರಸ್ತೆಯ ಚನ್ನರಾಯಪ್ಪ ಬಡಾವಣೆಯಲ್ಲಿ ವಾಸವಿರುವ ಅವರಿಗೆ ಮಕ್ಕಳಿಲ್ಲ. ಅವರನ್ನು ಪೋಷಣೆ ಮಾಡುವವರು ಇಲ್ಲ. ಮಾಸಾಶನ ನಂಬಿ ಜೀವನ ನಡೆಸುವ ಅವರ ಬದುಕು ಈಗ ಸಂಕಷ್ಟಕ್ಕೆ ಸಿಲುಕಿದೆ.
‘ನನ್ನ ಮೊಮ್ಮಗಳು ರೇಷ್ಮೆ ನೂಲು ಬಿಚ್ಚಾಣಿಕೆ ಕೆಲಸ ಮಾಡಿಕೊಂಡು, ಕೆಲಸದ ನಡುವೆ ಬಂದು ನನಗೆ ಊಟ ಕೊಟ್ಟು ಹೋಗುತ್ತಾಳೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಜಯಪುರ ಶಾಖೆಗೆ ನನ್ನ ಮಾಸಾಶನ ಬರುತ್ತಿತ್ತು. ಮೂರು ತಿಂಗಳಿಂದ ಬ್ಯಾಂಕಿಗೆ ಹೋಗಿ ವಿಚಾರಿಸುತ್ತಿದ್ದೇನೆ. ಬಂದಿಲ್ಲವೆಂದು ಹೇಳುತ್ತಿದ್ದಾರೆ. ಬ್ಯಾಂಕಿಗೆ ಹೋಗಿ ಬರುವುದಕ್ಕೂ ನನಗೆ ಶಕ್ತಿಯಿಲ್ಲ. ಅಧಿಕಾರಿಗಳ ಬಳಿಗೆ ಹೋಗುವುದಕ್ಕೂ ಆಗುತ್ತಿಲ್ಲ’ ಅಳಲು ತೋಡಿಕೊಂಡ ಅವರು, ಕಂದಾಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮಾಸಾಶನ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.
‘ಪಡಿತರ ಚೀಟಿಗೆ ತಿಂಗಳಿಗೆ 5 ಕೆ.ಜಿ ಅಕ್ಕಿ ಕೊಡುತ್ತಾರೆ. ಊಟ ತಯಾರಿಸಿಕೊಡುವಂತೆ ಮೊಮ್ಮಗಳಿಗೆ ಹೇಳುತ್ತೇನೆ. ಆಕೆ ತಯಾರಿಸಿಕೊಟ್ಟು ನೂಲು ಬಿಚ್ಚಾಣಿಕೆ ಕೆಲಸಕ್ಕೆ ಹೋಗುತ್ತಾಳೆ. ಮಾಸಾಶನದಲ್ಲಿ ಅಡುಗೆಗೆ ಬೇಕಾಗಿರುವ ಇತರೆ ಸಾಮಗ್ರಿಗಳು ಖರೀದಿಸುತ್ತಿದ್ದೆ. ಈಗ ಮೂರು ತಿಂಗಳಿಂದ ಹಣವಿಲ್ಲದೆ ಕಷ್ಟವಾಗಿದೆ’ ಎಂದು ಸಮಸ್ಯೆ ವಿವರಿಸಿದರು.
ಯಾವ ಕಾರಣಕ್ಕೆ ಮುನಿಶಾಮಪ್ಪ ಅವರಿಗೆ ಮಾಸಾಶನ ಬರುತ್ತಿಲ್ಲ ಎಂದು ಪರಿಶೀಲನೆ ನಡೆಸಿ ಮಾಸಾಶನ ತಲುಪಿಸಲು ಕ್ರಮವಹಿಸಲಾಗುವುದು– ಸತ್ಯನಾರಾಯ ರಾಜಸ್ವ ನಿರೀಕ್ಷಕ ಕಂದಾಯ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.