ADVERTISEMENT

ಸ್ವಯಂ ನಿರ್ಬಂಧಕ್ಕೆ ಒಳಗಾದ ಜನರು

​ಪ್ರಜಾವಾಣಿ ವಾರ್ತೆ
Published 24 ಮೇ 2020, 15:18 IST
Last Updated 24 ಮೇ 2020, 15:18 IST
ದೊಡ್ಡಬಳ್ಳಾಪುರದಲ್ಲಿ ಭಾನುವಾರದ ಲಾಕ್‌ಡೌನ್‌ನಿಂದಾಗಿ ಬಿಕೋ ಎನ್ನುತ್ತಿರುವ ರಸ್ತೆಗಳು
ದೊಡ್ಡಬಳ್ಳಾಪುರದಲ್ಲಿ ಭಾನುವಾರದ ಲಾಕ್‌ಡೌನ್‌ನಿಂದಾಗಿ ಬಿಕೋ ಎನ್ನುತ್ತಿರುವ ರಸ್ತೆಗಳು   

ದೊಡ್ಡಬಳ್ಳಾಪುರ: 4ನೇ ಹಂತದ ಲಾಕ್‌ಡೌನ್‌ ನಿಯಮಗಳಲ್ಲಿ ಭಾನುವಾರ ಜಾರಿಗೆ ತರಲಾಗಿರುವ ಕಟ್ಟುನಿಟ್ಟಿನ ಲಾಕ್‌ಡೌನ್‌ ನಗರದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.

ಇಷ್ಟು ದಿನಗಳ ಕಾಲ ಜನರನ್ನು ಮನೆಯಲ್ಲಿಯೇ ಇರುವಂತೆ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಆದರೆ ಭಾನುವಾರ ಬೆಳಿಗ್ಗೆ 8 ಗಂಟೆವರೆಗೆ ಒಂದಿಷ್ಟು ಜನ ಮಾಂಸದ ಅಂಗಡಿ, ತರಕಾರಿ ಅಂಗಡಿಗಳ ಸಮೀಪ ಖರೀದಿ ಮಾಡುತ್ತಿದ್ದ ದೃಶ್ಯ ಹೊರತುಪಡಿಸಿದರೆ ಇಡೀ ದಿನ ಸಂಜೆಯವರೆಗೂ ಸಹ ಅನಾವಶ್ಯಕವಾಗಿ ಜನರ ಒಡಾಟವೇ ಇಲ್ಲದಾಗಿತ್ತು. ನಗರದ ಬಸ್‌ ನಿಲ್ದಾಣ, ಕೊಂಗಾಡಿಯಪ್ಪ ಮುಖ್ಯರಸ್ತೆ, ಮಾರುಕಟ್ಟೆ ಪ್ರದೇಶಗಳಲ್ಲಿ ಯಾವುದೇ ಅಂಗಡಿಗಳ ಬಾಗಿಲು ತೆರೆದಿರಲಿಲ್ಲ. ಆಸ್ಪತ್ರೆ, ಔಷಧಿ ಅಂಗಡಿಗಳು ಮಾತ್ರ ಬಾಗಿಲು ತೆರೆದಿದ್ದರೂ ಜನ ಕಡಿಮೆ ಇದ್ದರು.

ಆಟೋ ಸೇರಿದಂತೆ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸದಾ ವಾಹನ ಸಂಚಾರದಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣ, ಮುಖ್ಯರಸ್ತೆ, ಡಿ.ಕ್ರಾಸ್, ಟಿ.ಬಿ.ವೃತ್ತ, ತಾಲ್ಲೂಕು ಕಚೇರಿ ವೃತ್ತ, ಇಸ್ಲಾಂಪುರ ರಸ್ತೆಗಳಲ್ಲಿ ವಾಹನಗಳ ಹಾಗೂ ಜನಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದವು.

ADVERTISEMENT

ನಗರದ ಹೊರವಲಯಗಳ ಕೆಲವೆಡೆ ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಪೂರ್ವನಿಯೋಜಿತ ವಿವಾಹ ಕಾರ್ಯಕ್ರಮಗಳು ಹೊರತಾಗಿ ಯಾವುದೇ ಸಭೆ ಸಮಾರಂಭಗಳು ನಡೆಯಲಿಲ್ಲ. ಭಾನುವಾರವಾದ್ದರಿಂದ ನಗರದಲ್ಲಿ ನೇಕಾರಿಕೆಯೂ ಸಂಪೂರ್ಣ ಸ್ಥಬ್ದವಾಗಿತ್ತು. ನಗರದ ಕೆಲವೇ ಸ್ಥಳಗಳಲ್ಲಿ ಮಾತ್ರ ಪೊಲೀಸರು ಇದ್ದರು.

ತಾಲ್ಲೂಕಿಗೆ ಹೊರ ರಾಜ್ಯಗಳಿಂದ ಕಾರ್ಮಿಕರು ಬರಲು ಆರಂಭವಾದ ಮೇಲೆ ಇಲ್ಲಿಯು ಮೂರು ಜನರಿಗೆ ಕೋವಿಡ್‌-19 ಸೋಂಕು ದೃಢಪಟ್ಟ ನಂತರ ಜನರಲ್ಲಿ ಒಂದಿಷ್ಟು ಆಂತಕ ಮೂಡಿದ್ದು ಸ್ವಯಂ ಪ್ರೇರಿತವಾಗಿ ನಿರ್ಬಂಧಗಳನ್ನು ಪಾಲಿಸಲು ಮುಂದಾಗಿದ್ದಾರೆ. ಹೀಗಾಗಿಯೇ ಭಾನುವಾರದ ಲಾಕ್‌ಡೌನ್‌ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.