ದೊಡ್ಡಬಳ್ಳಾಪುರ:ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿಯಾಗಿರುವ ನಗರದ ಕೋರ್ಟ್ ಸಮೀಪದ ರೋಜೀಪುರದಲ್ಲಿನ ಐತಿಹಾಸಿಕ ಕಲ್ಯಾಣಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಶನಿವಾರ ಭೇಟಿ ನೀಡಿದ್ದರು.
ಸ್ಥಳೀಯ ರೋಜೀಪುರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಕಲ್ಯಾಣಿ ಅಭಿವೃದ್ಧಿ ಸಮಿತಿಯ ಪನ್ನೂರು ಮಾತನಾಡಿ, ‘ಇಲ್ಲೊಂದು ಕಲ್ಯಾಣಿ ಇತ್ತು ಎಂದು ತಿಳಿಯುತ್ತಲೇ ಇರಲಿಲ್ಲ. ಕೊಚ್ಚೆ ತುಂಬಿಕೊಂಡಿದ್ದ ಸ್ಥಳವನ್ನು ಹಿಂದಿನ ಜಿಲ್ಲಾಧಿಕಾರಿ ಕರೀಗೌಡ ಅವರ ಮಾರ್ಗದರ್ಶನದಲ್ಲಿ ಜನರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲಾಗಿದೆ’ ಎಂದರು.
‘ಕಲ್ಯಾಣಿಗೆ ಕಟ್ಟಲಾಗಿದ್ದ ಕಲ್ಲುಗಳು ಬಿದ್ದುಹೋಗಿದ್ದವು. ಹೂಳು ತೆಗೆದು ಕಲ್ಲುಕಟ್ಟಡವನ್ನು ಹಿಂದಿನ ರೀತಿಯಲ್ಲಿ ಜೋಡಿಸಲಾಗಿದೆ. ಕಲ್ಯಾಣಿಗೆ ನೀರು ಸಹ ಬಂದಿದೆ. ಕಲ್ಯಾಣಿ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಉದ್ಯಾನ ನಿರ್ಮಿಸಲು, ಸುತ್ತ ಕಾಂಪೌಂಡ್ ಕಟ್ಟಲು ನಗರಸಭೆ ವತಿಯಿಂದ ಆರ್ಥಿಕ ನೆರವು ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ‘ಕಲ್ಯಾಣಿ ಅಭಿವೃದ್ಧಿಗೊಳಿಸಿಸುಂದರವಾಗಿಸಿರುವುದು ಸಂತಸ ತಂದಿದೆ. ನಗರಸಭೆಯಿಂದ ಇಲ್ಲಿ ಉದ್ಯಾನವನ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಅಗತ್ಯ ಇರುವ ಹಣವನ್ನು ಶೀಘ್ರವಾಗಿ ಮಂಜೂರು ಮಾಡಲಾಗುವುದು. ಕಲ್ಯಾಣಿ ಕೆಲಸಕ್ಕೆ ಜನರು ಕೈಜೋಡಿಸಿರುವುದು ಸ್ವಾಗತಾರ್ಹ’ ಎಂದರು.
ಜಿಲ್ಲಾಧಿಕಾರಿ ಕಚೇರಿ ವ್ಯವಸ್ಥಾಪಕ ನರಸಿಂಹಮೂರ್ತಿ, ನಗರಸಭೆ ಪೌರಾಯುಕ್ತ ಆರ್.ಮಂಜುನಾಥ್ ಹಾಗೂ ಸ್ಥಳೀಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.