ADVERTISEMENT

ಅರ್ಜಿ ಇತ್ಯರ್ಥಕ್ಕೆ ಕ್ರಮ

ಕಂದಾಯ, ಪಿಂಚಣಿ ಅದಾಲತ್‌ ಪ್ರಯೋಜನ ಪಡೆಯಲು ಜಿಲ್ಲಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 2:35 IST
Last Updated 23 ಅಕ್ಟೋಬರ್ 2020, 2:35 IST
ಶ್ರೀನಿವಾಸಪುರದಲ್ಲಿ ಗುರುವಾರ ನಡೆದ ಕಂದಾಯ ಮತ್ತು ಪಿಂಚಣಿ ಅದಾಲತ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಿದರು.
ಶ್ರೀನಿವಾಸಪುರದಲ್ಲಿ ಗುರುವಾರ ನಡೆದ ಕಂದಾಯ ಮತ್ತು ಪಿಂಚಣಿ ಅದಾಲತ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಿದರು.   

ಶ್ರೀನಿವಾಸಪುರ: ‘ಸಾರ್ವಜನಿಕರು ಕಂದಾಯ ಹಾಗೂ ಪಿಂಚಣಿ ಅದಾಲತ್‌ನ‌ ಪ್ರಯೋಜನ ಪಡೆದುಕೊಳ್ಳಬೇಕು. ಸರ್ಕಾರದ ನಿಯಮಾನುಸಾರ ಅದಾಲತ್‌ನಲ್ಲಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪಿಂಚಣಿ ಮತ್ತು ಕಂದಾಯ ಅದಾಲತ್‌ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.

ಹೋಬಳಿ ಮಟ್ಟದಲ್ಲಿ ಅದಾಲತ್‌ ನಡೆಸಿ ಮಂಜೂರಾತಿ ಪತ್ರ ವಿತರಿಸುತ್ತಿರುವುದರಿಂದ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದರು.

ADVERTISEMENT

ಎಲ್ಲ ಸಮಸ್ಯೆಗಳಿಗೂ ಸ್ಥಳದಲ್ಲಿ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ. ಅರ್ಜಿ ಸಲ್ಲಿಸಿದ ಸುಮಾರು ಒಂದರಿಂದ ಒಂದೂವರೆ ತಿಂಗಳ ಕಾಲ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಅಧ್ಯಯನ ಮಾಡಿ ಪರಿಹಾರ ನೀಡುತ್ತಾರೆ. ಆದ್ದರಿಂದ ಅರ್ಜಿ ನೀಡಿದವರು ಹತಾಶರಾಗಬೇಕಾದ ಅಗತ್ಯ ಇಲ್ಲ. ಎಲ್ಲ ಅರ್ಜಿಗಳನ್ನೂ ನಿಯಮಾನುಸಾರ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರು ಕೊರೊನಾ ಬಗ್ಗೆ ಅಸಡ್ಡೆ ತೋರಬಾರದು. ಕೊರೊನಾ ವಿಷಯದಲ್ಲಿ ಸರ್ಕಾರದ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಕೆಲವರು ಕೊರೊನಾ ಸೋಂಕು ತಡೆಗಟ್ಟುವ ಸಂಬಂಧ ಸಿಬ್ಬಂದಿಯ ಕಾರ್ಯ ನಿರ್ವಹಣೆ ಕುರಿತು ಹಗುರವಾಗಿ ಮಾತನಾಡುವುದು ಸರಿಯಲ್ಲ. ಸಮಸ್ಯೆ ಗಂಭೀರವಾಗಿದೆ ಎಂಬುದನ್ನು ಅರಿಯಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೆ ಸಂಚರಿಸಬಾರದು. ಸಾಮಾಜಿಕ ಅಂತರ ಪಾಲನೆ ಕಡ್ಡಾಯ. ನಿಯಮಿತವಾಗಿ ಕೈ ತೊಳೆಯುವುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ವಿವಿಧ ಯೋಜನೆಯಡಿ 66 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಗಿದೆ. 266ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಹಂತ ಹಂತವಾಗಿ ಪರಿಶೀಲಿಸಿ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ತಹಶೀಲ್ದಾರ್‌ ಎಸ್‌.ಎಂ. ಶ್ರೀನಿವಾಸ್‌, ಉಪ ತಹಶೀಲ್ದಾರ್‌ ಮಲ್ಲೇಶ್‌, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ. ಮುನಿರೆಡ್ಡಿ, ಗುರುರಾಜ ರಾವ್‌, ಮುನಿವೆಂಕಟಪ್ಪ, ಹರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.