ADVERTISEMENT

ಅತಿ ಪ್ಲಾಸ್ಟಿಕ್‌ ಬಳಕೆ; ಕ್ಯಾನ್ಸರ್‌ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 14:16 IST
Last Updated 20 ಮಾರ್ಚ್ 2024, 14:16 IST
ದೊಡ್ಡಬಳ್ಳಾಪುರದ ಕಮಲಾದೇವಿ ಚಟ್ಟೋಪಾಧ್ಯಾಯ ಮಹಿಳಾ ಚಿಂತನ ವೇದಿಕೆ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸ್ತ್ರೀರೋಗ ತಜ್ಞೆ ಡಾ.ಇಂದಿರಾ ಶ್ಯಾಂಪ್ರಸಾದ್‌ ಮಾತನಾಡಿದರು
ದೊಡ್ಡಬಳ್ಳಾಪುರದ ಕಮಲಾದೇವಿ ಚಟ್ಟೋಪಾಧ್ಯಾಯ ಮಹಿಳಾ ಚಿಂತನ ವೇದಿಕೆ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸ್ತ್ರೀರೋಗ ತಜ್ಞೆ ಡಾ.ಇಂದಿರಾ ಶ್ಯಾಂಪ್ರಸಾದ್‌ ಮಾತನಾಡಿದರು   

ದೊಡ್ಡಬಳ್ಳಾಪುರ: ವಯಸ್ಸಾಗುತ್ತಿರುವಂತೆ ಸಹಜವಾಗಿಯೇ ನೆನಪು ಕಡಿಮೆಯಾಗುತ್ತದೆ. ಇದರ ನಿವಾರಣೆಗೆ ಸದಾ ಸಣ್ಣ ಪುಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸ್ತ್ರೀರೋಗ ತಜ್ಞೆ ಡಾ.ಇಂದಿರಾ ಶ್ಯಾಂಪ್ರಸಾದ್‌ ಹೇಳಿದರು.

ಅವರು ನಗರದ ಕಮಲಾದೇವಿ ಚಟ್ಟೋಪಾಧ್ಯಾಯ ಮಹಿಳಾ ಚಿಂತನ ವೇದಿಕೆ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಪಿಕ್‌ ಆಂಡ್‌ ಸ್ಪೀಚ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಯಸ್ಸಿನ ನೆಪದಲ್ಲಿ ಮಹಿಳೆಯರು ಹೆಚ್ಚಿನ ಸಮಯವನ್ನು ಟಿವಿ, ಮೊಬೈಲ್‌ಗಳನ್ನು ನೋಡುವುದರಲ್ಲೇ ಕಳೆಯುತ್ತಾರೆ. ಇದರಿಂದ ನೆನಪಿನ ಶಕ್ತಿ ಕುಗ್ಗುವುದಲ್ಲದೆ. ವಿವಿಧ ರೀತಿಯ ಅನಾರೋಗ್ಯದ ಸಮಸ್ಯೆಗಳು ಉಂಟಾಗಲಿವೆ. ಬೆಳಗಿನ ಸಮಯದಲ್ಲಿ ಸಾಧ್ಯವಾದಷ್ಟು ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಬಹುತೇಕ ಅನಾರೋಗ್ಯದ ಸಮಸ್ಯೆಗಳ ತಡೆಗೆ ಮತ್ತು ನಿವಾರಣೆಗೆ ನಡೆಯುವುದೇ ಚಿಕಿತ್ಸೆಯಾಗಿದೆ. ನಡೆಯಲು ಸಾಧ್ಯವಿಲ್ಲದಷ್ಟು ವಯಸ್ಸಾದವರು ಮನೆಯಲ್ಲೇ ಯೋಗಾಸಾನಗಳನ್ನು ಮಾಡಬೇಕು. ಇದರಿಂದ ಹಾರ್ಮೋನ್‌ಗಳ ವ್ಯತ್ಯಾಸದಿಂದ ಉಂಟಾಗುವ ಹಲವಾರು ದೈಹಿಕ, ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಸಹ ತಡೆಯಬಹುದಾಗಿದೆ ಎಂದರು.

ADVERTISEMENT

ಇತ್ತೀಚಿನ ಅಂಕಿಅಂಶಗಳ ಪ್ರಕಾರ ಕ್ಯಾನ್ಸ್‌ರ್‌ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಲ್ಲಿ ಮಹಿಳೆಯರ ಸಂಖ್ಯೆಯು ಹೆಚ್ಚಾಗಿದೆ. ಪ್ಲಾಸ್ಟಿಕ್‌ ಬಾಟಲಿಗಳ ನೀರು ಬಳಕೆ, ಪ್ಲಾಸ್ಟಿಕ್‌ ಪೊಟ್ಟಣಗಳಲ್ಲಿ ಬೇಯಿಸಿದ ಅಥವಾ ಪ್ಯಾಕ್‌ ಮಾಡಿದ ತಿಂಡಿಗಳ ಬಳಕೆಯೇ ಕ್ಯಾನ್ಸರ್‌ ರೋಗ ಹೆಚ್ಚಾಗಲು ಕಾರಣವಾಗಿದೆ. ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಬೇಕಿದೆ. ವರ್ಷಕ್ಕೆ ಒಮ್ಮೆಯಾದರೂ ಮಹಿಳೆಯರು ಕ್ಯಾನ್ಸರ್‌ ರೋಗದ ತಪಾಸಣೆ ಮಾಡಿಸಿಕೊಳ್ಳಬೇಕು. ಕ್ಯಾನ್ಸ್‌ರ್‌ ತಡೆಗೆ ಇರುವ ಪ್ರಥಮ ಹೆಜ್ಜೆ ಸೂಕ್ತ ಸಮಯದಲ್ಲಿ ಪತ್ತೆ ಹಚ್ಚುವುದೇ ಆಗಿದೆ ಎಂದರು.

ಹಿರಿಯ ವಕೀಲೆ ಚಂದ್ರಕಲಾ ಮಾತನಾಡಿ, ಮಹಿಳೆಯರಿಗೆ ಕಾನೂನು ಅರಿವಿನ ಕೊರತೆ ಇದೆ. ಇದರಿಂದಾಗಿಯೇ ಮಹಿಳೆಯರ ಪರವಾಗಿರುವ ಹಲವಾರು ಕಾನೂನುಗಳು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಮಹಿಳೆಯರು ಆಸ್ತಿಯ ಹಕ್ಕಿನ ಬಗ್ಗೆ ಮಾತ್ರ ಮಾಹಿತಿ ಪಡೆಯದೇ ತಮ್ಮ ಪರವಾಗಿ ಇರುವ ಎಲ್ಲಾ ಕಾನೂನುಗಳ ಬಗ್ಗೆಯು ಕನಿಷ್ಠ ಮಟ್ಟದ ತಿಳಿವಳಿಕೆಯನ್ನು ಪಡೆಯಬೇಕಿದೆ ಎಂದರು.

ಲೇಖಕಿ ಕೆ.ಎಸ್‌.ಪ್ರಭಾ, ವಯಸ್ಸಾದ ನಂತರ ಮಹಿಳೆ ಆರ್ಥಿಕ ಸ್ವಾವಲಂಬನೆಯಾದರೆ ಮಾತ್ರ ಸಾಲದು, ಆರೋಗ್ಯ ಸ್ವಾವಲಂಬನೆಯನ್ನು ಸಾಧಿಸಬೇಕಿದೆ. ಇದಕ್ಕೆ ಅಗತ್ಯ ತಿಳಿವಳಿಕೆಯನ್ನು ಸದಾ ಪಡೆಯುತ್ತಿರಬೇಕು. ಮಹಿಳಾ ದಿನಾಚರಣೆ ನೆಪದಲ್ಲಿ ತಮ್ಮ ವ್ಯಕ್ತಿತ್ವಗಳನ್ನು ಬೆಳೆಸಿಕೊಳ್ಳುವ ಕಡೆಗೆ ಮಹಿಳೆಯರು ಆದ್ಯತೆ ನೀಡಬೇಕಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ನಡೆದ ಪಿಕ್‌ ಆಂಡ್‌ ಸ್ಪೀಚ್‌ ಸ್ಪರ್ಧೆಯಲ್ಲಿ ವಿವಿಧ ವಿಷಯಗಳ ಕುರಿತು ಹಲವಾರು ಜನ ಮಹಿಳೆಯರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನಮ್ಮ, ಮಹಿಳಾ ಸಮಾಜದ ನಿರ್ದೇಶಕರಾದ ದೇವಕಿ, ಯಶೋದಾ ಹಾಗೂ ಅಂಬಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.