ADVERTISEMENT

ಪ್ಲಟೂನ್ ಕಮಾಂಡರ್‌ ರವೀಂದ್ರರಿಗೆ ರಾಷ್ಟ್ರಪತಿ ಪದಕ 

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 13:27 IST
Last Updated 25 ಜನವರಿ 2019, 13:27 IST
ಆರ್.ಎನ್.ರವೀಂದ್ರ
ಆರ್.ಎನ್.ರವೀಂದ್ರ   

ದೇವನಹಳ್ಳಿ: ಗೃಹ ರಕ್ಷಕದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾಲ್ಲೂಕಿನ ರೆಡ್ಡಿಹಳ್ಳಿ ಗ್ರಾಮದ ಪ್ಲಟೂನ್ ಕಮಾಂಡರ್ ಆರ್.ಎನ್ ರವೀಂದ್ರಗೆ 2018–19 ಸಾಲಿನ ರಾಷ್ಟ್ರವತಿ ಪದಕ ಲಭಿಸಿದೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ರವೀಂದ್ರ, ‘ತಂದೆ ನಾಗರಾಜಪ್ಪ, ತಾಯಿ ಜಯಮ್ಮರ ಮೊದಲ ಮಗ, 10ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ತೇರ್ಗಡೆ ಹೊಂದಿದ್ದೇನೆ. ಕಿತ್ತು ತಿನ್ನುವ ಬಡತನ ಬೇರೆ, ಸಹೋದರ ಭೂ ಸೇನೆಯಲ್ಲಿ ಹವಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂದಿನ ಪರಿಸ್ಥಿತಿಯಲ್ಲಿ ಜೀವನಕ್ಕೆ ಒಂದು ಮಾರ್ಗ ಹುಡುಕಲೇ ಬೇಕಿತ್ತು. 2001ರಲ್ಲಿ ಗೃಹರಕ್ಷಕದಳದಲ್ಲಿ ನೇಮಕಗೊಂಡೆ’ ಎಂದು ಹೇಳಿದರು.

‘18 ವರ್ಷ ವಿವಿಧ ರೀತಿಯ ತರಬೇತಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಆನೇಕ ಸಂದರ್ಭದಲ್ಲಿ ಅಪಾಯ ಎಂಬುದು ಗೊತ್ತಿದ್ದರೂ ಹಿಂಜರಿಕೆ ಇಲ್ಲದೆ ಸೇವೆ ಸಲ್ಲಿಸಿದ್ದೇನೆ. ಉನ್ನತ ಅಧಿಕಾರಿಗಳಿಂದ 5 ಬಾರಿ ಪ್ರಶಂಸಾ ಪತ್ರ, ನಾಲ್ಕು ಬಾರಿ ಯೋಗ್ಯತಾ ಪತ್ರ, ನಗದು ಪುರಸ್ಕಾರ, ಅಭಿನಂದನೆ, ಸನ್ಮಾನ ಮಾಡಿದ್ದಾರೆ. 2012 ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ದೊರಕಿದೆ’ ಎಂದು ಹೇಳಿದರು .

ADVERTISEMENT

‘ರೈಫಲ್ ಸಹಿತ ಸ್ಕ್ವಾಡ್ ಡ್ರಿಲ್ ತರಬೇತಿ ನಂತರದ ಸ್ಪರ್ಧೆಯಲ್ಲಿ 2005, 2015 ಮತ್ತು 2017 ರಲ್ಲಿ ಪ್ರಥಮ ಸ್ಥಾನ ಪಡೆದಿದ್ದೇನೆ. ಮಧ್ಯ ಪ್ರದೇಶ, ತೆಲಂಗಾಣ, ಅಂಡಮಾನ್ ನಿಕೋಬಾರ್‌ಗಳಲ್ಲಿ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಲ್ಲಿ ಗೃಹ ರಕ್ಷಕ ದಳದ ಪೆರೇಡ್ ತಂಡದ ನಾಯಕತ್ವ ವಹಿಸಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

2004 ರಲ್ಲಿ ಬೆಂಗಳೂರು ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯಡಿಯೂರು ಕೆರೆಯಲ್ಲಿ ಗಣೇಶ ವಿಸರ್ಜನೆಗೆ ಹೊಗಿದ್ದ 18 ವರ್ಷದ ಯುವಕ ಮೃತ ಪಟ್ಟಿದ್ದ ಸಂದರ್ಭದಲ್ಲಿ ಪೊಲೀಸರು ಹರಸಾಹಸ ಪಟ್ಟರೂ ಮೃತದೇಹ ಸಿಕ್ಕಿರಲಿಲ್ಲ. ನೀರಿನಲ್ಲಿ ಮುಳುಗಿ ಅದನ್ನು ಹೊರತಂದಿದ್ದೆ. ಯಾವುದೇ ಕ್ಷೇತ್ರದಲ್ಲಿದ್ದರೂ ನಿಷ್ಠೆಯಿಂದ ಸೇವೆ ಮಾಡಬೇಕು. ಯಾವುದೇ ಹುದ್ದೆ ಕೀಳು ಎಂಬ ಭಾವನೆ ಇಟ್ಟುಕೊಳ್ಳಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.