ADVERTISEMENT

ದೊಡ್ಡಬಳ್ಳಾಪುರ: ಗರಿಗೆದರಿದ ರಾಜಕೀಯ ಚಟುವಟಿಕೆ

ಪಂಚಾಯಿತಿ ಚುನಾವಣೆಗೆ ಹೈಕೋರ್ಟ್‌ ಗಡುವು; ಅಧಿಸೂಚನೆ ನಿರೀಕ್ಷೆಯಲ್ಲಿ ಆಕಾಂಕ್ಷಿಗಳು

ನಟರಾಜ ನಾಗಸಂದ್ರ
Published 2 ಜೂನ್ 2022, 8:49 IST
Last Updated 2 ಜೂನ್ 2022, 8:49 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು
ದೊಡ್ಡಬಳ್ಳಾಪುರ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು   

ದೊಡ್ಡಬಳ್ಳಾಪುರ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲು ರಾಜ್ಯ ಹೈಕೋರ್ಟ್‌ ಸರ್ಕಾರಕ್ಕೆ 12 ವಾರಗಳ ಗಡುವು ನೀಡುತ್ತಿದ್ದಂತೆ ತಾಲ್ಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಸ್ಥಳೀಯ ಸಂಸ್ಥೆಗಳ ಫಲಿತಾಂಶ ವಿಧಾನಸಭಾ ಚುನಾವಣೆ ಮೇಲೆ ಅಲ್ಪಸ್ವಲ್ಪವಾದರೂ ಪ್ರಭಾವ ಬೀರುತ್ತವೆ. ಹೀಗಾಗಿ ಹೇಗಾದರು ಮಾಡಿ ಹೆಚ್ಚಿನ ಸ್ಥಾನಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಜಯಗಳಿಸಬೇಕು ಎನ್ನುವ ಗುರಿಯೊಂದಿಗೆ ಎಲ್ಲಾ ರೀತಿಯಿಂದಲೂ ಗೆಲ್ಲುವ ‘ಸಮರ್ಥ’ ಅಭ್ಯರ್ಥಿಗಳ ಹುಡುಕಾಟದ ಕರಸತ್ತು ಆರಂಭವಾಗಿದೆ.

2016ರಲ್ಲಿ ತಾಲ್ಲೂಕು ಪಂಚಾಯಿತಿಗೆ ನಡೆದಿದ್ದ ಚುನಾವಣೆಯಲ್ಲಿ 22 ಸ್ಥಾನಗಳ ಪೈಕಿ 16 ಕಾಂಗ್ರೆಸ್‌, 4 ಜೆಡಿಎಸ್‌ ಹಾಗೂ 2 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದರು. ಹಾಗೆಯೇ ಇದೇ ಸಂದರ್ಭದಲ್ಲಿ ನಡೆದ 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್‌ ಹಾಗೂ 2 ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ADVERTISEMENT

ಈಗ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ ನಂತರ 2 ತಾಲ್ಲೂಕು ಪಂಚಾಯಿತಿ ಹಾಗೂ 1 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಕಡಿತ ಮಾಡಲಾಗಿದೆ. ಹೀಗಾಗಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 20, ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 5ಕ್ಕೆ ನಿಗದಿ ಮಾಡಲಾಗಿದೆ.

2016ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳಿಗೆ ‘ಸಮರ್ಥ’ ಅಭ್ಯರ್ಥಿಗಳ ಇಲ್ಲದಾಗಿದ್ದು, ನಾಯಕರಲ್ಲಿನ ಒಗ್ಗಟ್ಟಿನ ಕೊರತೆ, ತಾಲ್ಲೂಕಿನಲ್ಲಿ ತಮ್ಮ ಪಕ್ಷಗಳ ಶಾಸಕರು ಹಾಗೂ ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದೇ ಇದ್ದದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಯ್ಕೆಯಾಗಲು ಸಾಧ್ಯವಾಗಿರಲಿಲ್ಲ. ಇದರ ಲಾಭವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದ ಕಾಂಗ್ರೆಸ್‌ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ರಾಜಕೀಯ ಚಿತ್ರಣ ಬೇರೆಯಾಗಲಿದೆ ಎನ್ನುವುದು ಬಿಜೆಪಿ ಮುಖಂಡರ ವಾದ.

ಹೈಕೋರ್ಟ್‌ ಆದೇಶದಂತೆಯೇ ಚುನಾವಣೆಗಳು ನಡೆದರೆ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಮುಗಿದ ಒಂದೆರಡು ತಿಂಗಳಲ್ಲೇ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ಶಾಸಕರಾಗುವ ಆಕಾಂಕ್ಷಿಗಳಿಗೆ ಹೆಚ್ಚಿನ ಸ್ಥಾನಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಹೊಣೆಗಾರಿಕೆಯೂ ಇವರ ಹೆಗಲಿಗೆ ಬಿದ್ದಿದೆ. ಪಂಚಾಯಿತಿ ಚುನಾವಣೆ ಒಂದು ರೀತಿಯ ವಿಧಾನ ಸಭಾ ಚುನಾವಣೆಗೂ ಮುನ್ನ ಟಿಕೆಟ್‌ ಆಕಾಂಕ್ಷಿಗಳ ಸಾಮರ್ಥ್ಯ ಪರೀಕ್ಷೆಯಾಗಿರಲಿದೆ.

ಎಲ್ಲರನ್ನು ಕಾಡುತ್ತಿದೆ ಒಗ್ಗಟ್ಟಿನ ಕೊರತೆ
ತಾಲ್ಲೂಕಿನ ಒಂದು ದಶಕದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೂರು ಪಕ್ಷಗಳ ಸ್ಥಳೀಯ ಮುಖಂಡರಲ್ಲಿ ಒಗ್ಗಟ್ಟಿನ ಕೊರತೆ ವಿಧಾನಸಭಾ ಚುನಾವಣೆಯ ಆಕಾಂಕ್ಷಿಗಳನ್ನು ಬೆಂಬಿಡದಂತೆ ಕಾಡುತ್ತಿದೆ. ಇದರ ಪರಿಣಾಮ ಸಹಜವಾಗಿಯೇ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯ ಮೇಲೆ ಬೀರಲಿದೆ. ಹೀಗಾಗಿ ಯಾವ ಪಕ್ಷದ ಮುಖಂಡರುಒಗ್ಗಟ್ಟನ್ನು ಶೀಘ್ರವಾಗಿ ಸರಿಪಡಿಸಿಕೊಳ್ಳುತ್ತಾರೋ, ಆ ಪಕ್ಷವು ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದೆ ಎನ್ನುವುದು ಮೂರು ಪಕ್ಷಗಳ ಮುಖಂಡರ ವಾದವಾಗಿದೆ.

ಈ ಹಿಂದೆ ತಾಲ್ಲೂಕಿನ ಮಟ್ಟಿಗೆ ಜೆಡಿಎಸ್‌,ಬಿಜೆಪಿಯಲ್ಲಿ ಮಾತ್ರ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿತ್ತು. ಆದರೆ ಈಗ ಕಾಂಗ್ರೆಸ್‌ ಪಕ್ಷದ ಮುಖಂಡರಲ್ಲೂ ಒಗ್ಗಟ್ಟಿನ ಕೊರತೆ ಉಂಟಾಗಿದ್ದು ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ವೇಳೆಗೆ ಸ್ಥಳೀಯ ಮಟ್ಟದ ಮುಖಂಡರನ್ನು ಒಂದೇ ವೇದಿಕೆಗೆ ತರುವುದೇ ಪಕ್ಷದ ವರಿಷ್ಠರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಅಭ್ಯರ್ಥಿಗಳ ಘೋಷಣೆ ಅನಿವಾರ್ಯ
ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ಎಲ್ಲಾಪಕ್ಷಗಳಿಗೂ ತಳಮಟ್ಟದಲ್ಲಿ ಕಾರ್ಯಕರ್ತರು, ಮುಖಂಡರನ್ನು ಗಟ್ಟಿಗೊಳಿಸಿಕೊಳ್ಳಲು ಇರುವ ಅವಕಾಶವಾಗಿದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಸಹ ಪಂಚಾಯಿತಿ ಚುನಾವಣೆಗೂ ಮುನ್ನವೇ ವಿಧಾನಸಭಾ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವುದು ಈಗ ಅನಿವಾರ್ಯವಾಗಿದೆ. ಇಲ್ಲವಾದರೆ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಯಾರೂ ಸಹ ಖರ್ಚು ವೆಚ್ಚಗಳನ್ನು ಭರಿಸಲು ಮುಂದೆ ಬರುವುದಿಲ್ಲ. ಇದರ ಪರಿಣಾಮ 2023ರ ವಿಧಾನಸಭಾ ಚುನಾವಣೆಯ ಮೇಲೆ ಬೀಳಲಿದೆ ಎನ್ನುತ್ತಾರೆ ಮೂರು ಪಕ್ಷಗಳಲ್ಲಿನನಿಷ್ಠಾವಂತ ಕಾರ್ಯಕರ್ತರು.

ಅಗತ್ಯ ಖರ್ಚು, ವೆಚ್ಚ ನೋಡಿಕೊಳ್ಳಬೇಕು...
ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರವಾಗಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯಕರ್ತರ ಅಗತ್ಯ ಖರ್ಚು ವೆಚ್ಚಗಳನ್ನು ನೋಡಿಕೊಂಡರಷ್ಟೇ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲು ಸಾಧ್ಯ. ಆದರೆ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಸೇರಿದಂತೆ ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲೂಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗುವ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಯಾರು ಎಷ್ಟೇ ಖರ್ಚು ಮಾಡಿದರು ಅಂತಿಮವಾಗಿ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ನಾವು ಕೆಲಸ ಮಾಡುತ್ತೇವೆಎನ್ನುವ ಮಾತುಗಳುನಿಷ್ಠಾವಂತ ಕಾರ್ಯಕರ್ತರಲ್ಲಿ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.