ADVERTISEMENT

ಅಕ್ರಮ ರಸಗೊಬ್ಬರ ಮಾರಾಟ ತಡೆಗೆ ಪಿಒಎಸ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 13:45 IST
Last Updated 29 ಜೂನ್ 2018, 13:45 IST
ಭೂಮಿ ಉಳುಮೆಯಲ್ಲಿ ತೊಡಗಿಸಿಕೊಂಡಿರುವ ರೈತ
ಭೂಮಿ ಉಳುಮೆಯಲ್ಲಿ ತೊಡಗಿಸಿಕೊಂಡಿರುವ ರೈತ   

ದೇವನಹಳ್ಳಿ: ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಗಳ ಅಕ್ರಮ ಮಾರಾಟ ತಡೆಗಟ್ಟಲು ಕೇಂದ್ರ ಸರ್ಕಾರ ಪಿ.ಒ.ಎಸ್‌ ಅಳವಡಿಕೆ ಮಾಡಲು ಅಧಿಕೃತ ಮಾರಾಟಗಾರರಿಗೆ ಕಡ್ಡಾಯಗೊಳಿಸಿದೆ.

ರೈತರಿಗೆ ನಿಗದಿತ ಬೆಲೆಯಲ್ಲಿ ಮತ್ತು ಸಕಾಲದಲ್ಲಿ ರಸಗೊಬ್ಬರ ಸಿಗಬೇಕೆಂಬ ಉದ್ದೇಶದಿಂದ ಪಿ.ಒ.ಎಸ್‌ ಉಪಕರಣದ ಮೂಲಕ ರಸಗೊಬ್ಬರ ವಿತರಣೆ ಮಾಡಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರದ ಆದೇಶ ಪಾಲಿಸಲು ತಪ್ಪಿದ್ದಲ್ಲಿ ಮಾರಾಟ ಪರವಾನಗಿ ರದ್ದು ಮಾಡುವುದಾಗಿ ಜಂಟಿ ಕೃಷಿ ಇಲಾಖೆಯೂ ಎಚ್ಚರಿಕೆ ನೀಡಿದೆ.

ಮಾರಾಟಗಾರರು ದಾಸ್ತನು ಮಾಡಿಕೊಂಡಿರುವ ರಸಗೊಬ್ಬರದ ಸಂಪೂರ್ಣ ಮಾಹಿತಿಯನ್ನು ಎಂಎಸ್‌ಎಂಎಸ್ (ಮೊಬೈ ಫರ್ಟಿಲೈಜರ್‌ ಮ್ಯಾನೇಜ್‌ಮೆಂಟ್ ಸಿಸ್ಟಮ್‌) ತಂತ್ರಾಂಶದಲ್ಲಿ ದಾಖಲಿಸಿ ಅದರಲ್ಲಿ ಬರುವ ಐಡಿಯನ್ನು ಪಡೆದು ಪಿಒಎಸ್‌ ಉಪಕರಣದಲ್ಲಿ ದಾಖಲಿಸಬೇಕು.

ADVERTISEMENT

ಈ ವಿಧಾನ ಅನುಸರಿಸುವುದರಿಂದ ಪ್ರತಿ ದಿನ ಮಾರಾಟವಾದ ಗೊಬ್ಬರದ ಪ್ರಮಾಣ, ಉಳಿಕೆಯಾಗಿರುವ ದಾಸ್ತುನು, ತಾಲ್ಲೂಕು ಮತ್ತು ಜಿಲ್ಲೆಗೆ ಅವಶ್ಯವಿರುವ ರಸಗೊಬ್ಬರದ ಮಾಹಿತಿಯು ಸುಲಭವಾಗಿ ಕೇಂದ್ರ ರಸಗೊಬ್ಬರ ಇಲಾಖೆಗೆ ತಲುಪಲಿದೆ.

ದೇಶದಲ್ಲಿಯೇ ಇದೆ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಜಾರಿಯಾಗಿದ್ದು, ಜಿಲ್ಲೆಯಲ್ಲಿ ಶೇ 100 ಮಾರಾಟಗಾರರು ಪಿಒಎಸ್‌ ಅಳವಡಿಸಿಕೊಂಡಿದ್ದಾರೆ. ಇದರ ಬಗ್ಗೆ ಅವರಿಗೆ ತರಬೇತಿ ಈಗಾಗಲೇ ನೀಡಲಾಗಿದೆ ಎಂದು ಜಂಟಿ ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎನ್.ಮಂಜುಳಾ ಮಾತನಾಡಿ, ನೇರ ನಗದು ವರ್ಗಾವಣೆ(ಡಿ.ಬಿ.ಟಿ.)ಯೋಜನೆಯಡಿ ರಸಗೊಬ್ಬರ ಖರೀದಿಸುವ ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿಯನ್ನು ಹೊಂದಿರಬೇಕು. ರೈತರ ಪರವಾಗಿ ಖರೀದಿಸುವವರು ಆಧಾರ್ ಕಾರ್ಡ್ ಹೊಂದಿರಲೇಬೇಕು ಎಂದು ತಿಳಿಸಿದ್ದಾರೆ.

ರಸಗೊಬ್ಬರ ಕುರಿತು ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಗಿರೀಶ್, ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ 8960 ಮೆಟ್ರಿಕ್ ಟನ್ ಗೊಬ್ಬರ ಬೇಡಿಕೆ ಈ ಬಾರಿಯ ಮುಂಗಾರು ಹಂಗಾಮಿನಲ್ಲಿತ್ತು, ಈ ಪೈಕಿ 7524 ಮೆಟ್ರಿಕ್ ಟನ್ ಪೂರೈಕೆ ಮಾಡಲಾಗಿದೆ ಎಂದರು.‌

ದೇವನಹಳ್ಳಿ ತಾಲ್ಲೂಕು 1010 ಮೆಟ್ರಿಕ್ ಟನ್ ಬೇಡಿಕೆ ಪೈಕಿ 1129 ಟನ್, ದೊಡ್ಡಬಳ್ಳಾಪುರ 3420 ಮೆಟ್ರಿಕ್ ಟನ್ ಪೈಕಿ 2633 ಟನ್, ಹೊಸಕೋಟೆ 2325 ಮೆಟ್ರಿಕ್ ಟನ್ ಪೈಕಿ 1881 ಮೆಟ್ರಿಕ್ ಟನ್ ಪೂರೈಕೆ ಮಾಡಲಾಗಿದೆ, ನೆಲಮಂಗಲ 1245 ಮೆಟ್ರಿಕ್ ಟನ್ ಈಗಾಗಲೇ ವಿವರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಧ್ಯಮ ಮತ್ತು ಅಲ್ಪಾವಧಿ ಬೆಳೆ ಬಿತ್ತನೆ ಸೂಕ್ತ :‌

ಗ್ರಾಮಾಂತರ ಜಿಲ್ಲೆಯಲ್ಲಿ ಈವರೆವಿಗೆ ವಾರ್ಷಿಕ ಮಳೆ 202 ಮಿ.ಮೀ.ಪೈಕಿ 329 ಮಿ.ಮೀ.ರಷ್ಟು ಮಳೆ ಸುರಿದಿದ್ದು, ಶೇ.63 ರಷ್ಟು ಹೆಚ್ಚುವರಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 48 ರಷ್ಟು ಉತ್ತಮ ಮಳೆಯಾಗಿದೆ. ಕಳೆದ 20 ದಿನಗಳಿಂದ ತೊಗರಿ, ಮುಸುಕಿನ ಜೋಳ ಬಿತ್ತನೆಯಾಗುತ್ತಿದೆ ಪ್ರಸ್ತುತ ರೈತರಿಗೆ ಮಧ್ಯಮ ಮತ್ತು ಅಲ್ಪಾವಧಿ ಬೆಳೆ ಬಿತ್ತನೆಗೆ ಸೂಕ್ತವಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ರೈತರ ಸುಸ್ಥಿರ ಆರ್ಥಿಕ ಭದ್ರತೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೊಳಿಸಿದೆ.‌ 2018ನೇ ಸಾಲಿನಲ್ಲಿ ಮುಂಗಾರು ಜತೆಗೆ ಜಿಲ್ಲೆಯ ಅಧಿಸೂಚಿತ ಬೆಳೆಗಳಾದ ರಾಗಿ, ಭತ್ತ, ಮುಸುಕಿನ ಜೋಳ, ಹುರುಳಿ, ನೆಲಗಡಲೆ ಬೆಳೆಯುವ ರೈತರು ಈ ಯೋಜನೆಯಲ್ಲಿ ನೊಂದಾಯಿಸಿಕೊಳ್ಳುವ ಅವಕಾಶವಿದೆ.‌

ರಾಗಿ, ಭತ್ತ, ಮುಸುಕಿನ ಜೋಳ ಮತ್ತು ಹುರುಳಿ ಬೆಳೆಗಳಿಗೆ ಆಗಸ್ಟ್.14 ಮತ್ತು ತೊಗರಿ ಬೆಳೆಗೆ ಜುಲೈ.15 ಹಾಗೂ ನೆಲಗಡಲೆ ಜುಲೈ 31 ರಂದು ಬೆಳೆ ವಿಮೆ ನೊಂದಣಿಗೆ ಅಂತಿಮ ದಿನವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಸ್ಥಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕಳ್ಳಬಹುದೆಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.