
ರಸ್ತೆ ಗುಂಡಿಗಳನ್ನು ಮುಚ್ಚಬೇಕೆಂದು ಒತ್ತಾಯಿಸಿ ಆನೇಕಲ್ ಲೋಕೋಪಯೋಗಿ ಕಚೇರಿ ಮುಂಭಾಗ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿ ಪ್ರತಿಭಟನೆ ನಡೆಸಿದರು
ಆನೇಕಲ್: ತಾಲ್ಲೂಕಿನ ರಸ್ತೆ ಗುಂಡಿಗಳನ್ನು ಮುಚ್ಚಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಲೋಕೋಪಯೋಗಿ ಇಲಾಖೆ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಏತಕ್ಕಾಗಿ ಹೋರಾಟ ರಸ್ತೆಗಾಗಿ ಹೋರಾಟ’, ‘ಬೇಕೇ ಬೇಕು ರಸ್ತೆ ಬೇಕು’ ಎಂಬಿತ್ಯಾದಿ ಘೋಷಣೆಗಳು ಪ್ರತಿಭಟನೆಯಲ್ಲಿ ಮುಳಗಿದವು.
ಆನೇಕಲ್ ತಾಲೂಕಿನ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿವೆ. ಇದರಿಂದ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಪ್ರತಿದಿನ ರಸ್ತೆ ಗುಂಡಿಗಳಿಂದಾಗಿ ನರಕ ಯಾತನೆ ಅನುಭವಿಸುವಂತಾಗಿದೆ. ಪ್ರತಿದಿನ ಇದೇ ರಸ್ತೆಗಳಲ್ಲಿ ಸಂಚರಿಸುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಪ್ರಭಾಕರ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆ ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಡಾಂಬರೀಕರಣ ಕಾರ್ಯಕ್ಕೆ ವೇಗ ನೀಡಬೇಕು. ಇಲ್ಲವಾದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಯ ಕರ್ನಾಟಕ ಸಂಘಟನೆಯ ಆನೇಕಲ್ ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಮಹಿಳಾ ಘಟಕದ ಅಧ್ಯಕ್ಷ ಯಾಸ್ಮಿನ್ ತಾಜ್, ಮುಖಂಡರಾದ ವಿನೋದ್, ಮೂರ್ತಿ, ಮಧು, ನಾಗರಾಜ್, ಮಂಜುನಾಥ್, ಸೀಮಾ, ಲಕ್ಷ್ಮಿ, ಶಾಹಿನ್, ಬಂಗಾರ ಬಾಬು, ರಮೇಶ್ ಬಾಬು, ದಿಲ್ಶದ್, ಹರ್ಷದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.