ADVERTISEMENT

ಸುಂಕ ವಿನಾಯಿತಿಗೆ ಕುಂಬಾರರ ಮನವಿ

ಹಬ್ಬ ಆಚರಣೆಗೆ ಅನುಮತಿ: ಮೂರ್ತಿ ಮಾರಾಟಗಾರರು ನಿರಾಳ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 6:17 IST
Last Updated 20 ಆಗಸ್ಟ್ 2020, 6:17 IST
ದೊಡ್ಡಬಳ್ಳಾಪುರದಲ್ಲಿ ಗಣೇಶಮೂರ್ತಿ ಮಾರಾಟಕ್ಕೆ ನಗರಸಭೆ ಸ್ಥಳ ಸುಂಕ ವಸೂಲಿ ಮಾಡದಂತೆ ಸರ್ವಜ್ಞ ಕುಂಬಾರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ದೊಡ್ಡಬಳ್ಳಾಪುರದಲ್ಲಿ ಗಣೇಶಮೂರ್ತಿ ಮಾರಾಟಕ್ಕೆ ನಗರಸಭೆ ಸ್ಥಳ ಸುಂಕ ವಸೂಲಿ ಮಾಡದಂತೆ ಸರ್ವಜ್ಞ ಕುಂಬಾರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.   

ದೊಡ್ಡಬಳ್ಳಾಪುರ:‘ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿರುವುದು ಗಣೇಶ ಮಾರಾಟಗಾರರಲ್ಲಿ ಸಮಾಧಾನ ತಂದಿದೆ’ ಎಂದು ಸರ್ವಜ್ಞ ಕುಂಬಾರ ಸಂಘದ ಅಧ್ಯಕ್ಷ ಬಿ.ವಿರೂಪಾಕ್ಷ ತಿಳಿಸಿದ್ದಾರೆ.

‘ಲಾಕ್‌ಡೌನ್‌ ಜಾರಿಗೆ ಬಂದಾಗಿ ನಿಂದಲೂ ಕುಂಬಾರಿಕೆಯನ್ನೇ ನಂಬಿ ಕೊಂಡ ಕುಟುಂಬಗಳು ಯಾವುದೇ ರೀತಿಯ ವ್ಯಾಪಾರ ವಹಿವಾಟು ಇಲ್ಲದೆ ಜೀವನ ನಡೆಸಲು ಪರದಾಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಸರ್ಕಾರದಿಂದಲೂ ಯಾವುದೇ ಪರಿಹಾರವು ದೊರೆಯಲಿಲ್ಲ. ಈಗ ಸರ್ಕಾರ ಗಣೇಶ ಉತ್ಸವಕ್ಕೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಿ ಅನುಮತಿ ನೀಡಿರುವುದು ಸ್ವಾಗತಾರ್ಹ’ ಎಂದರು.

‘ನಗರಸಭೆ ವ್ಯಾಪ್ತಿಯ ಮಾರುತಿನಗರ, ಕುಂಬಾರ ಪೇಟೆ ಮುಖ್ಯರಸ್ತೆಯಲ್ಲಿ ಮಣ್ಣಿನ ಗಣೇಶಮೂರ್ತಿಗಳನ್ನು ಕುಂಬಾರ ಜನಾಂಗದವರು ಮಾರಾಟ ಮಾಡಲಿದ್ದಾರೆ. ಇಲ್ಲಿನ ಮಾರಾಟಗಾರರಿಂದ ನಗರಸಭೆ ವತಿಯಿಂದ ಯಾವುದೇ ರೀತಿಯ ಮಾರಾಟ ಸ್ಥಳ ಸುಂಕ ವಸೂಲಿ ಮಾಡದೆ ರಿಯಾಯಿತಿ ನೀಡುವಂತೆ ನಗರಸಭೆ ಪೌರಾಯುಕ್ತರಿಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ’ ಎಂದರು.

ADVERTISEMENT

‘ಸರ್ಕಾರದ ಹೊಸ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಕಡ್ಡಾಯ. ಒಂದು ವಾರ್ಡ್ ಅಥವಾ ಗ್ರಾಮಕ್ಕೆ ಒಂದೇ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಮನವಿ ಮಾಡಲಾಗಿದೆ’ ಎಂದರು.

ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಪ್ರತಿವರ್ಷ ಗಣೇಶ ಮೂರ್ತಿಗಳ ಮಾರಾಟ ಮಾಡಲು ಮೂರ್ತಿ ತಯಾರಕರು ಸಿದ್ಧರಾಗುತ್ತಿದ್ದರು. ಆದರೆ ಈ ಬಾರಿ ಕೊರೊನಾ ವೈರಸ್‌ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಸರ್ಕಾರದ ಗಣೇಶೋತ್ಸವದ ಮಾರ್ಗಸೂಚಿಗಳು ಹಾಗೂ ನಗರಸಭೆ ಬ್ಯಾನರ್ ಪ್ರಕಟಣೆಗಳು ವ್ಯಾಪಾರಸ್ಥರಿಗೆ ಗೊಂದಲ ಮೂಡಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.