ADVERTISEMENT

ಲೋಡ್‌ ಶೆಡ್ಡಿಂಗ್‌ ಇಲ್ಲ: ದುರಸ್ತಿ ಹೆಸರಲ್ಲಿ ಕಣ್ಣಾಮುಚ್ಚಾಲೆ ತಪ್ಪಿಲ್ಲ!

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 15:30 IST
Last Updated 14 ಜೂನ್ 2023, 15:30 IST
ಕೋಟಿಗಾನಹಳ್ಳಿ ಗಣೇಶ್‌ ಗೌಡ, ರೈತ ಮುಖಂಡ, ಕೋಲಾರ
ಕೋಟಿಗಾನಹಳ್ಳಿ ಗಣೇಶ್‌ ಗೌಡ, ರೈತ ಮುಖಂಡ, ಕೋಲಾರ   

ತುಮಕೂರು: ವಿಧಾನಸಭೆ ಚುನಾವಣೆ ಮುಗಿದ ನಂತರ ತುಮಕೂರು ಜಿಲ್ಲೆಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಧಾನವಾಗಿ ಕಡಿಮೆಯಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಅಂತಹ ಸಮಸ್ಯೆ ಆಗುತ್ತಿಲ್ಲ. ವಿದ್ಯುತ್ ಕಡಿತ ಮಾಡುವ ಸಮಯವೂ ಕಡಿಮೆಯಾಗಿದೆ. ಆದರೆ ನಿರಂತರವಾಗಿ ವಿದ್ಯುತ್ ಸರಬರಾಜು ಇರುವುದಿಲ್ಲ. ಒಂದು ಅಥವಾ ಎರಡು ತಾಸಿಗೊಮ್ಮೆ ಇದ್ದಕ್ಕಿದ್ದಂತೆ ಐದ್ಹತ್ತು ನಿಮಿಷ ಕಡಿತ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಸಮಸ್ಯೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಐದಾರು ತಾಸು ವಿದ್ಯುತ್ ಪೂರೈಕೆ ಮಾಡುತ್ತಿದ್ದು, ತಾಸಿಗೊಮ್ಮೆ ಕಡಿತ ಮಾಡುವುದು, ಮತ್ತೆ ಸರಬರಾಜು ಮಾಡುವ ಸ್ಥಿತಿ ಇದೆ.

‘ವಿದ್ಯುತ್ ಉತ್ಪಾದಿಸುವ ಅಣೆಕಟ್ಟೆಗಳಲ್ಲಿ ನೀರು ಕಡಿಮೆಯಾಗಿದೆ. ಮಳೆ ಇಲ್ಲದೆ ಬಿಸಿಲು ಮುಂದುವರಿದಿದ್ದು, ಬಳಕೆ ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ತೀವ್ರ ಸಮಸ್ಯೆ ಎದುರಾಗಲಿದೆ’ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಲೋಡ್ ಶೆಡ್ಡಿಂಗ್ ಜಾರಿಯಲ್ಲಿ ಇಲ್ಲ. ಯಾವುದೇ ಸಮಸ್ಯೆಯಾಗಿಲ್ಲ’ ಎಂದು ಸೂಪರಿಂಟೆಂಡಿಂಗ್ ಎಂಜಿನಿಯರ್ ಲೋಕೇಶ್ ಹೇಳುತ್ತಾರೆ.

ಕೋಲಾರ ವರದಿ: ಕೋಲಾರ ಬೆಸ್ಕಾಂ ವ್ಯಾಪ್ತಿಯಲ್ಲಿ ಸಂಜೆ ಹೊತ್ತು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಅನಿಯಮಿತ ಲೋಡ್‌ ಶೆಡ್ಡಿಂಗ್‌ ಮಾಡಲಾಗುತ್ತಿದೆ. ಆದರೆ, ನಿತ್ಯ ಇಂತಿಷ್ಟು ತಾಸು ನಿರ್ದಿಷ್ಟ ಲೋಡ್ ಶೆಡ್ಡಿಂಗ್‌ ಮಾಡುತ್ತಾರೆ ಎಂದೇನಿಲ್ಲ. ನಗರ ಪ್ರದೇಶದಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲ. ಇನ್ನುಳಿದಂತೆ ದುರಸ್ತಿ ಹೆಸರಿನಲ್ಲಿ ಆಗಾಗ್ಗೆ ವಿದ್ಯುತ್‌ ಪೂರೈಕೆಯಲ್ಲಿ ಉಂಟಾಗುವ ವ್ಯತ್ಯಯ ಮುಂದುವರಿದಿದೆ.

‘ಕೆಲವೊಮ್ಮೆ ಸಂಜೆ ಹೊತ್ತಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಸ್ವಲ್ಪ ಹೊತ್ತು ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ’ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.

ರಾಮನಗರ ವರದಿ: ರಾಮನಗರ ಜಿಲ್ಲೆಯಲ್ಲಿ ಲೋಡ್‌ ಶೆಡ್ಡಿಂಗ್‌ ಕಡಿಮೆಯಾದರೂ ಮಾಸಿಕ ಮತ್ತು ತ್ರೈಮಾಸಿಕ ನಿರ್ವಹಣಾ ಕಾರ್ಯ ಹಾಗೂ ತುರ್ತು ಕಾಮಗಾರಿ ಹೆಸರಲ್ಲಿ ವಿದ್ಯುತ್‌ ವ್ಯತ್ಯಯವಾಗಿದ್ದೇ ಹೆಚ್ಚು! ರಾಮನಗರ ವೃತ್ತದ ವಿವಿಧೆಡೆ ಕಳೆದ ಒಂದು ತಿಂಗಳಲ್ಲಿ ಸುಮಾರು 38 ಸಲ ಲೋಡ್ ಶೆಡ್ಡಿಂಗ್ ಆಗಿದೆ.  

ಮೇ 1ರಿಂದ ಜೂನ್‌ 13ರವರೆಗೆ ರಾಮನಗರ ವಿಭಾಗದಲ್ಲಿ 15 ಬಾರಿ, ಚಂದಾಪುರ ವಿಭಾಗದಲ್ಲಿ ಒಂಬತ್ತು ಸಲ ಹಾಗೂ ಕನಕಪುರ ಮತ್ತು ಮಾಗಡಿಯಲ್ಲಿ ತಲಾ ಏಳು ಸಲ ಲೋಡ್ ಶೆಡ್ಡಿಂಗ್ ಆಗಿದೆ.

‘ರಾಮನಗರ ವೃತ್ತದ ವಿದ್ಯುತ್ ಮಾರ್ಗ ಹಾಗೂ ಉಪ ಕೇಂದ್ರಗಳ ಮಾಸಿಕ ಮತ್ತು ತ್ರೈಮಾಸಿಕ ನಿರ್ವಹಣೆಗಾಗಿ ನಿಗದಿತ ದಿನಗಳಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ. ಆಯಾ ಉಪ ಕೇಂದ್ರಗಳ ವ್ಯಾಪ್ತಿಯ ಪ್ರದೇಶದಲ್ಲಾಗುವ ವಿದ್ಯುತ್ ವ್ಯತ್ಯಯದ ಮಾಹಿತಿಯನ್ನು ಒಂದೆರಡು ದಿನ ಮುಂಚೆಯೇ ಮಾಧ್ಯಮಗಳಿಗೆ ನೀಡುತ್ತೇವೆ’ ಎಂದು ಹೆಸ್ಕಾಂ ರಾಮನಗರ ವೃತ್ತದ ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ, ಗಾಳಿಯಿಂದ ವಿದ್ಯುತ್‌ ಕಂಬ ಅಥವಾ ತಂತಿ ಮೇಲೆ ಮರ, ಕೊಂಬೆ ಬಿದ್ದು ಹಾನಿಯಾದರೆ, ವಾಹನಗಳು ಕಂಬಕ್ಕೆ ಡಿಕ್ಕಿ ಹೊಡೆದು ಕಂಬ ಮುರಿದರೆ ಅನಿಗದಿತವಾಗಿ ವಿದ್ಯುತ್ ಸ್ಥಗಿತಗೊಳಿಸುತ್ತೇವೆ. ದುರಸ್ತಿ ಕಾರ್ಯ ಮುಗಿದ ಬಳಿಕ ಮತ್ತೆ ವಿದ್ಯುತ್ ಸಂಪರ್ಕ ಮರುಸ್ಥಾಪಿಸುತ್ತೇವೆ’ ಎಂದರು.

ಗೋಪಾಲ್ ರೈತ ದೊಡ್ಡಗಂಗವಾಡಿ

ಉಚಿತ ವಿದ್ಯುತ್‌ ಘೋಷಿಸಿದ ಮೇಲೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಾಸವಿದೆ. ವಿದ್ಯುತ್‌ ಯಾವಾಗ ಹೋಗುತ್ತದೆ ಯಾವಾಗ ಬರುತ್ತದೆ ಗೊತ್ತಾಗುತ್ತಿಲ್ಲ. ಅನಿಯಮಿತ ವಿದ್ಯುತ್‌ ಕಡಿಗೊಳಿಸಿ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಕೇಳಿದರೆ ದುರಸ್ತಿಯ ನೆಪ ಹೇಳುತ್ತಾರೆ. ಕೃಷಿ ಉದ್ದೇಶದ ಪಂಪ್‌ಸೆಟ್‌ಗಳಿಗೆ ದಿನದಲ್ಲಿ ಬೆಳಿಗ್ಗೆ 3 ತಾಸು ರಾತ್ರಿ 3 ತಾಜು 3 ಫೇಸ್‌ ವಿದ್ಯುತ್‌ ಕೊಡುತ್ತಿದ್ದಾರೆ. ಆ ಅವಧಿಯಲ್ಲೂ ಹಲವಾರು ಬಾರಿ ಕಡಿತಗೊಳಿಸುತ್ತಾರೆ/

-ಕೋಟಿಗಾನಹಳ್ಳಿ ಗಣೇಶ್‌ ಗೌಡ ರೈತ ಮುಖಂಡ ಕೋಲಾರ

ಇತ್ತೀಚೆಗೆ ಬೆಳಿಗ್ಗೆ ಮಧ್ಯಾಹ್ನ ಹಾಗೂ ಸಂಜೆ ವಿದ್ಯುತ್ ತೆಗೆಯುತ್ತಿದ್ದಾರೆ. ಯಾವಾಗ ವಿದ್ಯುತ್ ಬರುತ್ತದೆ ಹೋಗುತ್ತದೆ ಎಂಬುದು ಗೊತ್ತಾಗುವುದಿಲ್ಲ.

– ಗೋಪಾಲ್, ರೈತ ದೊಡ್ಡ ಗಂಗವಾಡಿ ರಾಮನಗರ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.