ದೊಡ್ಡಬಳ್ಳಾಪುರ: ತಾಲ್ಲೂಕಿನ ಸಿಂಗೇನಹಳ್ಳಿಯ ತುಂಬು ಗರ್ಭಿಣಿಯೊಬ್ಬರು ಬುಧವಾರ ಮೃತ ಮೃತಪಟ್ಟಿದ್ದಾರೆ. ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಪೋಷಕರು, ಸಂಬಂಧಿಕರು ಇಲ್ಲಿಯ ತಾಯಿ ಮಗು ಸರ್ಕಾರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ಸಿಂಗೇನಹಳ್ಳಿಯ ಸುಶ್ಮಿತ ಮೃತ ಮಹಿಳೆ. ಪೊಲೀಸರ ಮನವೊಲಿಕೆ ನಂತರ ಪೋಷಕರು ಪ್ರತಿಭಟನೆ ಕೈಬಿಟ್ಟರು. ತಾಯಿ ಭಾಗ್ಯಮ್ಮ ಮತ್ತು ಸಂಬಂಧಿ ಕೃಷ್ಣಪ್ಪ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂಬ ಪೋಷಕರ ಆರೋಪ ತಳ್ಳಿ ಹಾಕಿರುವ ವೈದ್ಯಾಧಿಕಾರಿಗಳು, ಆಸ್ಪತ್ರೆಗೆ ಕರೆತರುವ ಮುನ್ನವೇ ಗರ್ಭಿಣಿ ಮೃತಪಟ್ಟಿದ್ದರು ಎಂದು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಪೋಷಕರಿಗೆ ಒಪ್ಪಿಸಲಾಯಿತು.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಆಗಸ್ಟ್7ರಂದು ಹೆರಿಗೆಯ ದಿನ ನೀಡಲಾಗಿತ್ತು. ಮಂಗಳವಾರ ಸಂಜೆ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಬಂದರು. ವೈದ್ಯರು ಇಲ್ಲದ ಕಾರಣ ಶುಶ್ರೂಕಿ ಬಳಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ವೈದ್ಯರ ಸಲಹೆ ಮೇರೆಗೆ ಮಾತ್ರೆ ನೀಡಿದ ಶುಶ್ರೂಕಿ, ಸುಶ್ಮಿತ ಅವರನ್ನು ಮನೆಗೆ ಕಳುಹಿಸಿದ್ದರು. ಆದರೆ, ಬುಧವಾರ ಬೆಳಗ್ಗೆ ಆಸ್ಪತ್ರೆಗೆ ಬಂದಾಗ ಸುಶ್ಮಿತ ಮೃತಪಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿದರು.
ಆಸ್ಪತ್ರೆಗೆ ಬರುವ ಮುನ್ನ ಮೃತ ಗರ್ಭಿಣಿ ಸುಶ್ಮಿತ ಆಸ್ಪತ್ರೆಗೆ ಬರುವ ಮುನ್ನವೇ ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಆದರೆ ಪೋಷಕರು ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿ ಹೇಳುತ್ತಿದ್ದಾರೆ. ಗರ್ಭಿಣಿಯರ ಸಾವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎನ್ನುವ ಆದೇಶವನ್ನು ಸರ್ಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ವೈದ್ಯರ ನಿರ್ಲಕ್ಷ್ಯ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.ಡಾ.ಲಕ್ಕ ಕೃಷ್ಣಾರೆಡ್ಡಿ ಜಿಲ್ಲಾ ಆರೋಗ್ಯ ಅಧಿಕಾರಿ. ಕೋಟ್–2 ವೈದ್ಯರ ನಿರ್ಲಕ್ಷ್ಯದಿಂದ ಸುಶ್ಮಿತ ಮೃತಪಟ್ಟಿರುವುದಾಗಿ ಅವರ ತಾಯಿ ಭಾಗ್ಯಮ್ಮ ದೂರು ನೀಡಿದ್ದಾರೆ. ಅನುಮಾನಸ್ಪದ ಸಾವಿನ ಪ್ರಕರಣ ಎಂದು ದೂರು ದಾಖಲಿಸಿಕೊಳ್ಳಲಾಗಿದೆ. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ದೃಶ್ಯ ಹಾಗೂ ವೈದ್ಯರ ಚಿಕಿತ್ಸೆ ವಿವರ ಪಡೆದು ತನಿಖೆ ನಡೆಸಲಾಗುವುದು.-ಅಮರೇಶ್‌ಗೌಡ ಇನ್‌ಸ್ಪೆಕ್ಟರ್ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ
ನಗರದ ಸರ್ಕಾರಿ ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಕೇಳಿ ಬರುತ್ತಿವೆ. ಆಸ್ಪತ್ರೆಯ ಆಡಳಿತ ಅಧಿಕಾರಿಗಳು ವೈದ್ಯರು ಸಿಬ್ಬಂದಿ ಒಳಗೊಂಡ ಆರೋಗ್ಯ ರಕ್ಷಾ ಸಮಿತಿ ರಚಿಸಿ ಒಂದು ವರ್ಷ ಕಳೆದಿದ್ದರೂ ಇದುವರೆಗೂ ಒಂದೂ ಸಭೆಯನ್ನೂ ನಡೆಸಿಲ್ಲ. ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಮೇಶ್ ಅವರನ್ನು ಪ್ರಶ್ನಿಸಿದರೆ ಸಭೆ ನಡೆಸಲು ಶಾಸಕರು ಸಮಯ ನೀಡುತ್ತಿಲ್ಲ ಎನ್ನುವ ಉತ್ತರ ನೀಡುತ್ತಾರೆ. ಇದರಿಂದ ಆಸ್ಪತ್ರೆಯಲ್ಲಿನ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಬಡವರಿಗೆ ಸೂಕ್ತ ಚಿಕಿತ್ಸೆ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ತಾಯಿ ಮಗು ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಎಂ.ಮಂಜುನಾಥ್ ದೂರಿದ್ದಾರೆ.
ತುರ್ತು ಸಭೆ; ಹೋರಾಟ ನಿರ್ಧಾರ
ನಗರದಲ್ಲಿನ ತಾಯಿ ಮಗು ಸರ್ಕಾರಿ ಆಸ್ಪತ್ರೆಯಲ್ಲಿನ ಗರ್ಭಿಣಿ ಸಾವಿನ ನಂತರ ಪ್ರಗತಿಪರ ಸಂಘಟನೆಗಳ ಮುಖಂಡರು ನಗರದ ಕನ್ನಡ ಜಾಗೃತ ಭವನದಲ್ಲಿ ಬುಧವಾರ ಸಂಜೆ ನಡೆದ ತುರ್ತು ಸಭೆ ನಡೆಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ಸಮಸ್ಯೆಗಳಿವೆ. ಬಡವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಗರ್ಭಿಣಿ ಸಾವು ಅತ್ಯಂತ ಗಂಭೀರ ಪ್ರಕರಣ. ಇದರ ವಿರುದ್ಧ ಸೂಕ್ತ ಹೋರಾಟ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಹೋರಾಟದ ರೂಪುರೇಷೆ ತೀರ್ಮಾನಿಸಲು ಆಗಸ್ಟ್ 8 ರಂದು ಸಂಜೆ 4 ಗಂಟೆಗೆ ಕನ್ನಡ ಜಾಗೃತ ಭವನದಲ್ಲಿ ತಾಲ್ಲೂಕಿನ ಎಲ್ಲಾ ಸಂಘಟನೆಗಳ ಮುಖಂಡರ ಸಭೆ ನಡೆಸಲು ತೀರ್ಮಾನಿಸಲಾಯಿತು.
ಎಂ.ಕೃಷ್ಣಮೂರ್ತಿ ಆರ್.ಚಂದ್ರತೇಜಸ್ವಿ ಎ.ಓ.ಆವಲಮೂರ್ತಿ ಸಂಜೀವ್ ನಾಯ್ಕ್ ಕವಿತಾ ವಂಕಟೇಶ್ ನರೇಂದ್ರ ಚಿದಾನಂದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.