ADVERTISEMENT

ದೊಡ್ಡಬಳ್ಳಾಪುರ: ಜೆಡಿಎಸ್‌ ರಥಯಾತ್ರೆ ಸ್ವಾಗತಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 4:01 IST
Last Updated 27 ನವೆಂಬರ್ 2022, 4:01 IST
ದೊಡ್ಡಬಳ್ಳಾಪುರ ತಾಲ್ಲೂಕಿನ ನಾರನಹಳ್ಳಿಯಲ್ಲಿ ಶುಕ್ರವಾರ ನಡೆದ ಪಂಚರತ್ನ ಯಾತ್ರೆ ಪೂರ್ವಭಾವಿ ಸಭೆಯನ್ನು ಜೆಡಿಎಸ್‌ ಮುಖಂಡ ಎಚ್‌. ಅಪ್ಪಯ್ಯ ಉದ್ಘಾಟಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ನಾರನಹಳ್ಳಿಯಲ್ಲಿ ಶುಕ್ರವಾರ ನಡೆದ ಪಂಚರತ್ನ ಯಾತ್ರೆ ಪೂರ್ವಭಾವಿ ಸಭೆಯನ್ನು ಜೆಡಿಎಸ್‌ ಮುಖಂಡ ಎಚ್‌. ಅಪ್ಪಯ್ಯ ಉದ್ಘಾಟಿಸಿದರು   

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ‘ಜೆಡಿಎಸ್‌ಪಂಚರತ್ನ ಯಾತ್ರೆಯು ನಾಡಿನ ಜನರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಆರೋಗ್ಯದ ಸಮಸ್ಯೆಯನ್ನೂ ಮೀರಿ ಬಡವರು, ರೈತಾಪಿ ವರ್ಗದ ಸಂಕಷ್ಟಕ್ಕೆ ಧಾವಿಸುವ ಉದ್ದೇಶದಿಂದ ರಾಜ್ಯ ವ್ಯಾಪಿ ಯಾತ್ರೆ ನಡೆಸುತ್ತಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್‌ಗೌಡ ಹೇಳಿದರು.

ತಾಲ್ಲೂಕಿನ ನಾರನಹಳ್ಳಿಯಲ್ಲಿ ಶುಕ್ರವಾರ ಜೆಡಿಎಸ್‌ನಿಂದ ಆಯೋಜಿಸಿದ್ದ ಪಂಚರತ್ನ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಜನರ ಸೇವೆ ಮಾಡಲು ಬಿಜೆಪಿಗೆ ಇಷ್ಟವಿಲ್ಲ. ಬದಲಿಗೆ ಸರ್ಕಾರದ ಖಜಾನೆಯನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ADVERTISEMENT

ಜನರಲ್ಲಿ ಭರವಸೆ ಮೂಡಿಸಿದ್ದ ಆಮ್ ಆದ್ಮಿ ಪಕ್ಷ ಕೂಡ ನಿರೀಕ್ಷೆಯನ್ನು ಹುಸಿಗೊಳಿಸಿದೆ. ದೆಹಲಿಯಲ್ಲಿ ಸಚಿವರು ಸರದಿ ಸಾಲಿನಲ್ಲಿ ಜೈಲು ಸೇರುತ್ತಿದ್ದಾರೆ. ಕುಮಾರಸ್ವಾಮಿ ಅವರು ಈ ಬಾರಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂದರು.

ಪಕ್ಷದ ಹೈಕಮಾಂಡ್ ಸೂಚನೆಯಂತೆ ಪಂಚರತ್ನ ಯಾತ್ರೆಯ ಪೂರ್ವಭಾವಿ ಸಭೆ ಮಾಡಿದ್ದೇವೆ. ನ. 29ರಂದು ನಾಗದೇನಹಳ್ಳಿ ಮೂಲಕ ಯಾತ್ರೆಯು ದೊಡ್ಡಬಳ್ಳಾಪುರ ತಾಲ್ಲೂಕಿಗೆ ಆಗಮಿಸಲಿದೆ. ಯಾತ್ರೆಗೆ ಅದ್ದೂರಿ ಸ್ವಾಗತ ಕೋರಲು ಸಿದ್ಧತೆ ನಡೆಸಲಾಗಿದೆ ಎಂದು
ತಿಳಿಸಿದರು.‌

ತೂಬಗೆರೆ, ಸಾಸಲು, ದೊಡ್ಡಬಳ್ಳಾಪುರ ನಗರ, ಮಧುರೆ ಹೋಬಳಿ ಮೂಲಕ ಯಾತ್ರೆ ಸಾಗಲಿದೆ. ಅಂದು ಸಂಜೆ ಕನಸವಾಡಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ಮಹತ್ವದ ಘೋಷಣೆಗಳನ್ನು ಮಾಡಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ಮುಖಂಡರಾದ ಎಚ್‌. ಅಪ್ಪಯ್ಯ, ಟಿ.ಎನ್‌. ಪ್ರಭುದೇವ, ರಾ. ಭೈರೇಗೌಡ, ಅಶ್ವತ್ಥನಾರಾಯಣ, ಆನಂದ್‌, ತಳವಾರ್‌ ನಾಗರಾಜ್‌, ಕೆಂಪೇಗೌಡ, ಬೋಪಣ್ಣ, ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.