ADVERTISEMENT

ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:58 IST
Last Updated 23 ಸೆಪ್ಟೆಂಬರ್ 2021, 3:58 IST
ದೇವನಹಳ್ಳಿyಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಮಾದಿಗ ದಂಡೋರ ಮುಖಂಡರು
ದೇವನಹಳ್ಳಿyಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಮಾದಿಗ ದಂಡೋರ ಮುಖಂಡರು   

ದೇವನಹಳ್ಳಿ: ‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಲು ವಿರೋಧ
ವ್ಯಕ್ತಪಡಿಸುತ್ತಿರುವ ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈ ಬಿಡುವಂತೆ ಹೋರಾಟ ಮಾಡಲಾಗುತ್ತದೆ’ ಎಂದು ಕರ್ನಾಟಕ ಮಾದಿಗ ದಂಡೋರ ರಾಜ್ಯ ಘಟಕದ ಪ್ರಚಾರ ಸಮಿತಿಯ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಎಚ್ಚರಿಕೆ ನೀಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾತಿ ಆಧಾರಿತವಾಗಿ ಜನಸಂಖ್ಯೆಗೆ ಅನುಗುಣವಾಗಿ ಜಾರಿಗೊಳಿಸಿ ಎನ್ನುವುದು ನಮ್ಮ ಒತ್ತಾಯವಾಗಿದೆ’ ಎಂದರು.

‘ಈ ವರದಿಯನ್ನುಅನುಷ್ಠಾನಗೊಳಿಸಬಾರದು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ಹೊರಟಿರುವ ಸ್ಪೃಶ್ಯ ಸಮುದಾಯಗಳು ನಮ್ಮ ಹೋರಾಟದ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನಾವು ಎಡಗೈ ಸಮುದಾಯದವರು ಯಾರ ಹಕ್ಕುಗಳನ್ನು ಕಿತ್ತುಕೊಳ್ಳಲಿಕ್ಕೆ ಹೋರಾಟ ಮಾಡುತ್ತಿಲ್ಲ. ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿರುವ ಎಲ್ಲಾ ಸಮುದಾಯಗಳ ಜನಸಂಖ್ಯೆಯ ಆಧಾರಿತವಾಗಿ ಪರಿಶಿಷ್ಟ ಜಾತಿಗೆ ಸರ್ಕಾರ ನೀಡುತ್ತಿರುವ ಮೀಸಲಾತಿಯನ್ನು ವರ್ಗೀಕರಣ ಮಾಡಿಕೊಡಿ, ರಾಜ್ಯದಲ್ಲಿ ಎಡಗೈ ಮತ್ತು ಬಲಗೈ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ.
ಅದರಲ್ಲೂ ಎಡಗೈ ಸಮುದಾಯ ಬಲಗೈ ಸಮುದಾಯಕ್ಕಿಂತ ಹೆಚ್ಚಿಗೆ ಇದ್ದೇವೆ. ಉಳಿದ ಎಲ್ಲಾ ಜಾತಿಗಳು ಕಡಿಮೆ ಸಂಖ್ಯೆಯ ಜನಸಂಖ್ಯೆಯನ್ನು ಹೊಂದಿದ್ದಾರೆ. ಆದರೂ ರಾಜಕೀಯ ಪ್ರಾತಿನಿಧ್ಯ ಪಡೆಯುವುದಾಗ ಹೆಚ್ಚಿನ ಜನಸಂಖ್ಯೆ ಇರುವವರಿಗಿಂತಲೂ ಕಡಿಮೆ ಜನಸಂಖ್ಯೆ ಇರುವವರೇ ಹೆಚ್ಚು ಅಧಿಕಾರ ಅನುಭವಿಸುತ್ತಿದ್ದಾರೆ’
ಎಂದರು.

ADVERTISEMENT

‘ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು, ಕೇವಲ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿಲ್ಲ, ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ,ಅವರನ್ನು ಒಂದು ಸಮುದಾಯಕ್ಕೆ ಸೀಮಿತವಾಗಬಾರದು ಎಂದು ಟೀಕಿಸುವುದನ್ನು ನಾವು ಖಂಡಿಸುತ್ತೇವೆ. ಅವರು ಹುಟ್ಟಿರುವ ಸಮುದಾಯಕ್ಕೆ ನ್ಯಾಯ ಕೊಡಬೇಕಾಗಿರುವುದು ಕೂಡ ಅವರ ಕರ್ತವ್ಯವಾಗಿದೆ. ಅದನ್ನೂ ಮಾಡಬೇಕು’ ಎಂದು ರಾಜಪ್ಪ ತಿಳಿಸಿದರು.

ಮಾದಿಗ ದಂಡೋರ ಜಿಲ್ಲಾ ಘಟಕದ ಅಧ್ಯಕ್ಷ ಮಾರಪ್ಪ ಮಾತನಾಡಿ, ‘ಸ್ಪೃಶ್ಯ ಜಾತಿಗಳು ದೇಶದಲ್ಲಿ ಯಾವ ರಾಜ್ಯದಲ್ಲೂ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರವೇ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೂ ಮನವರಿಕೆ ಮಾಡಿಕೊಡಲಾಗಿದೆ. ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವಾಗ, ನಮ್ಮ ಹೋರಾಟದ ಹಾದಿಯನ್ನು ತಪ್ಪಿಸಲಿಕ್ಕಾಗಿ ವರದಿ ಅನುಷ್ಠಾನ ಮಾಡಬಾರದು ಎಂದು ತೀರ್ಪು ಮಾಡಲಿಕ್ಕೆ ಇವರಿಗೆ ಏನು ಅಧಿಕಾರವಿದೆ’ ಎಂದು
ಪ್ರಶ್ನಿಸಿದರು.

ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಮಾರಪ್ಪ, ವಿಜಯಪುರ ಟೌನ್ ಅಧ್ಯಕ್ಷ ವೆಂಕಟೇಶ್ ಪ್ರಭು, ಮಾದಾರ ಮಹಾಸಭಾ ಅಧ್ಯಕ್ಷ ಮುನಿರಾಜು, ರಾಘವ, ಹೊಸಹುಡ್ಯ ಮುನಿರಾಜು, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.