ADVERTISEMENT

ಅಂಬೇಡ್ಕರ್‌ ವಿರುದ್ದ ಕಿರುಹೊತ್ತಗೆ: ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು

ನ. 26ರಂದು ಬೆಂಗಳೂರಿನ ದಲಿತ ಸಂಘಟನೆ ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 13:22 IST
Last Updated 19 ನವೆಂಬರ್ 2019, 13:22 IST
ತಾಲ್ಲೂಕು ಕಚೇರಿ ಮುಂದೆ ಪ್ರಜಾ ವಿಮೋಚನಾ ಚಳವಳಿ ಸಮತಾವಾದದ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ತಾಲ್ಲೂಕು ಕಚೇರಿ ಮುಂದೆ ಪ್ರಜಾ ವಿಮೋಚನಾ ಚಳವಳಿ ಸಮತಾವಾದದ ವತಿಯಿಂದ ಪ್ರತಿಭಟನೆ ನಡೆಸಲಾಯಿತು   

ದೊಡ್ಡಬಳ್ಳಾಪುರ:‘ಸಂವಿಧಾನ ದಿನದ ಆಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುದ್ರಿಸಿರುವ ಕಿರುಹೊತ್ತಗೆಯಲ್ಲಿ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೆ ಬರೆದಿಲ್ಲ ಎಂಬಂತೆ ಮುದ್ರಿಸಿ ಮಕ್ಕಳಿಗೆ ಹಂಚಲು ಮುಂದಾಗಿದ್ದಾರೆ. ಆ ಮೂಲಕ ಮನುವಾದಿ ಅಧಿಕಾರಿಗಳು ನಿಜ ಇತಿಹಾಸವನ್ನು ಮರೆಮಾಚಿ ಅಂಬೇಡ್ಕರ್ ವಿರುದ್ದ ಒಳಸಂಚು ರೂಪಿಸಿರುವುದರ ಕುರಿತು ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ರಾಜೀನಾಮೆ ನೀಡಬೇಕು’ ಎಂದು ಪ್ರಜಾ ವಿಮೋಚನಾ ಚಳವಳಿ ಸಮತಾವಾದದ ರಾಜ್ಯ ಅಧ್ಯಕ್ಷ ಇಂಡ್ಲವಾಡಿ ಬಸವರಾಜ್ ಒತ್ತಾಯಿಸಿದರು.

ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ರಾಜಿನಾಮೆಗೆ ಆಗ್ರಹ, ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ವಜಾಗೊಳಿಸಲು ಪಟ್ಟು ಹಾಗೂ ದಲಿತ ಮಿಸಲಾತಿ ವಿರೋಧಿ ಚೀ.ನಾ.ರಾಮು ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದ ಎಲ್ಲ ಶಾಲೆಯ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೆ ಇದ್ದ ಗೌರವಕ್ಕೆ ಧಕ್ಕೆ ತಂದಿದ್ದು, ಮುಂದಿನ ಯುವ ಪೀಳಿಗೆಗೆ ತಪ್ಪು ಮಾಹಿತಿ ನೀಡಿರುವುದು ಖಂಡನೀಯ. ಇದಕ್ಕೆ ಕಾರಣರಾದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರನ್ನು ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಂಘಟನೆಯ ರಾಜ್ಯ ಕಾರ್ಯದರ್ಶಿ ಭವಾನಿ ಪ್ರಸಾದ್ ಮಾತನಾಡಿ, ‘ಸಂವಿಧಾನ ಶಿಲ್ಪಿ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಅಡಿಯಲ್ಲಿ ಆಯ್ಕೆಯಾಗಿ, ಅಧಿಕಾರ ಪಡೆದವರು ಇಂದು ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿರುವುದು ಸರಿಯಲ್ಲ. ನ. 26ರಂದು ಬೆಂಗಳೂರಿನ ದಲಿತ ಸಂಘಟನೆ ವತಿಯಿಂದ ಈ ಕುರಿತು ಪ್ರತಿಭಟನೆ ಆಯೋಜಿಸಲಾಗಿದೆ’ ಎಂದರು.

ಹಿಂದುಳಿದ ವರ್ಗಗಳ ಮುಖಂಡ ರಫೀಕ್ ಮಾತನಾಡಿ, ‘ಸಂವಿಧಾನ ಶಿಲ್ಪಿಗೆ ಅವಮಾನವಾಗುತ್ತಿದ್ದರೂ ವಿರೋಧ ಪಕ್ಷ ಈ ಕುರಿತು ಧ್ವನಿ ಎತ್ತದಿರುವುದು ಖಂಡನೀಯ. ದೇಶದಲ್ಲಿ ಜಾತಿ ವ್ಯವಸ್ಥೆ ಹೋಗದ ಹೊರತು ಮೀಸಲಾತಿ ಅಗತ್ಯ’ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ.ಎ.ಮುನಿಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ರಾಜಘಟ್ಟ ರಾಮಾಂಜಿನಪ್ಪ, ಉಪಾಧ್ಯಕ್ಷ ಮಂಜುನಾಥ್ ಗೂಳ್ಯ, ಪ್ರಧಾನ ಕಾರ್ಯದರ್ಶಿ ಎಂ.ವಿ.ರಾಜು, ಬೆಂಗಳೂರು ವಿಭಾಗೀಯ ಅಧ್ಯಕ್ಷ ಚಿಕ್ಕನರಸಪ್ಪ, ನಗರ ಜಿಲ್ಲಾ ಅಧ್ಯಕ್ಷ ದೇವರಾಜ್, ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಅಧ್ಯಕ್ಷ ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.