ADVERTISEMENT

ಲೌಕಿಕ ವಿಚಾರದಿಂದ ನೆಮ್ಮದಿ ಭಂಗ

ಕೈದಿಗಳಿಗೆ ಮನಪರಿವರ್ತನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 1:57 IST
Last Updated 11 ಡಿಸೆಂಬರ್ 2021, 1:57 IST
ವಿಜಯಪುರ ಹೋಬಳಿಯ ಕೋರಮಂಗಲ ಬಯಲು ಕಾರಾಗೃಹದಲ್ಲಿ ಪ್ರಸಾದ್ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಮನಪರಿವರ್ತನಾ ಕಾರ್ಯಕ್ರಮದಲ್ಲಿ ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಮಾಳಿ ಮಾತನಾಡಿದರು
ವಿಜಯಪುರ ಹೋಬಳಿಯ ಕೋರಮಂಗಲ ಬಯಲು ಕಾರಾಗೃಹದಲ್ಲಿ ಪ್ರಸಾದ್ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಮನಪರಿವರ್ತನಾ ಕಾರ್ಯಕ್ರಮದಲ್ಲಿ ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಮಾಳಿ ಮಾತನಾಡಿದರು   

ವಿಜಯಪುರ: ‘ಪ್ರತಿಯೊಬ್ಬ ಮನುಷ್ಯ ಸನ್ಮಾರ್ಗದ ಕಡೆಗೆ ಸಾಗಬೇಕೆಂದು ಇಚ್ಛಿಸುತ್ತಾನೆ. ಆದರೆ, ಲೌಕಿಕ ವಿಚಾರದಲ್ಲಿ ಸಿಲುಕಿಕೊಂಡು ಪ್ರತಿನಿತ್ಯ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾನೆ’ ಎಂದು ಪ್ರಸಾದ್ ಚಾರಿಟಬಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕೆ.ಪಿ. ಮುನಿಯಪ್ಪ(ಡ್ಯಾನಿಯಲ್)
ಹೇಳಿದರು.

ಹೋಬಳಿಯ ಕೋರಮಂಗಲ ಬಯಲು ಕಾರಾಗೃಹದಲ್ಲಿ ಶುಕ್ರವಾರ ಪ್ರಸಾದ್ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಮನಪರಿವರ್ತನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವನ ಜೀವನದಲ್ಲಿ ಅಪರಾಧಗಳು ಅಸಹಜವಾಗಿ ನಡೆದು ಹೋಗುತ್ತವೆ. ನಡೆದು ಹೋಗಿರುವ ಅಪರಾಧಗಳನ್ನು ನೆನೆದು ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಆಗಿರುವ ತಪ್ಪು ತಿದ್ದಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಜೀವನ ರೂಪಿಸಿಕೊಳ್ಳಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.

ADVERTISEMENT

ಅಪರಾಧ ಪ್ರಕರಣಗಳಲ್ಲಿ ಬಂದಿಗಳಾಗಿರುವವರಿಗೆ ಮನಪರಿವರ್ತನೆಯಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ಬಂದಿಗಳಲ್ಲಿ ಪರಿವರ್ತನೆ ತರಲು ಸಾಧ್ಯವಾಗುತ್ತದೆ ಎಂದರು.

ಮುಖಂಡ ಜಾಕೋಬ್ ಮಾತನಾಡಿ, ಸಮಾಜದಲ್ಲಿ ನಾನಾ ಕಾರಣಗಳಿಂದ ಘಟಿಸುವ ಅಪರಾಧಗಳ ತಡೆಗೆ ಮನಪರಿವರ್ತನಾ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಸ್ವಯಂಕೃತ ಅಪರಾಧ ಎಸಗಿ ಶಿಕ್ಷೆ ಅನುಭವಿಸಿ, ಜೈಲಿನಿಂದ ಬಿಡುಗಡೆಯಾದವರು ಮುಂದೆ ಸಮಾಜದ ಸತ್ಪ್ರಜೆಯಾಗಿ ಬದುಕು ನಡೆಸಿರುವಂತಹ ಉದಾಹರಣೆ ಸಾಕಷ್ಟಿವೆ ಎಂದು ಹೇಳಿದರು.

ಬಂದಿಗಳು ಕಾರಾಗೃಹದಲ್ಲಿ ಸಿಗುವಂತಹ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸೇರಿದಂತೆ ವಿವಿಧ ಜೀವನದ ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಜೈಲಿನಿಂದ ಬಿಡುಗಡೆಯಾಗಿ ಹೋದ ನಂತರ ಎಲ್ಲರಂತೆ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಮಾಳಿ ಮಾತನಾಡಿ, ಬಂದಿಗಳಿಗೆ ಕೆಲಸ ಕೊಡುವುದು ಮಾತ್ರವಲ್ಲದೇ ಅವರಿಗೆ ಯೋಗ, ಧ್ಯಾನ, ಸಂಗೀತ ಕಲಿಕೆ ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಅವರ ಮನಪರಿವರ್ತನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರಾಗೃಹದ ಬಂದಿಗಳಿಗೆ ಟ್ರಸ್ಟ್‌ನಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಧ್ಯಾನ ಕಾರ್ಯಕ್ರಮ ನಡೆಯಿತು. ಟ್ರಸ್ಟ್‌ ಸದಸ್ಯರಾದ ಮನೋಹರ್, ಮುನಿರೆಡ್ಡಿ (ಮ್ಯಾಥ್ಯೂ), ಇಮ್ಮಾನುವೆಲ್, ಜಾಕೋಬ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.