ADVERTISEMENT

‘ಹೊಸ ಕಾಯ್ದೆಗಳಿಂದ ಅರಾಜಕತೆ; ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 11:19 IST
Last Updated 23 ಜನವರಿ 2020, 11:19 IST
ದೇವನಹಳ್ಳಿಯ ಮಿನಿವಿಧಾನ ಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು
ದೇವನಹಳ್ಳಿಯ ಮಿನಿವಿಧಾನ ಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು   

ದೇವನಹಳ್ಳಿ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರಗತಿಪರ ಮುಸ್ಲಿಂ ಸಂಘಟನೆಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದು ಮಿನಿವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿದರು.

ರಾಜ್ಯ ಕಾಂಗ್ರೆಸ್ ಮುಖಂಡ ಸಿ.ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಎನ್.ಆರ್.ಪಿ, ಸಿ.ಎ.ಎ ಮತ್ತು ಎನ್.ಪಿ.ಆರ್ ನಿಂದ ಅರಾಜಕತೆ ಸೃಷ್ಟಿಗೆ ಕಾರಣವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಜಾರಿ ಮಾಡದೆ ಇದ್ದ ಪೌರತ್ವ ತಿದ್ದುಪಡಿ ಕಾಯ್ದೆ ಯಾವ ಉದ್ದೇಶದಿಂದ ಜಾರಿ ಮಾಡಲಾಗಿದೆ ಎಂಬ ಸ್ಪಷ್ಟ ಚಿತ್ರಣ ಬಿಜೆಪಿ ಸರ್ಕಾರದಲ್ಲಿರುವ ಕೇಂದ್ರದ ಸಚಿವರಿಗೇ ತಿಳಿದಿಲ್ಲ ಎಂದು ಟೀಕಿಸಿದರು.

ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಅಭಿವೃದ್ಧಿ ಹೆಚ್ಚಲಿದೆ ಎಂಬ ಭಾವನೆ ಮತದಾರರಲ್ಲಿತ್ತು; ಅದೆಲ್ಲ ಸುಳ್ಳು ಎಂದು ಸಾಬೀತಾಗುತ್ತಿದೆ. ಪ್ರವಾಸ ಮಾಡುವ ದೇಶಗಳ ಪಟ್ಟಿ ಹೆಚ್ಚಾಗಿದೆ. ಅರ್ಥಿಕ ದಿವಾಳಿತನ, ನಿರುದ್ಯೋಗ ಸಮಸ್ಯೆ, ಜಿ.ಡಿ.ಪಿ ದರ ಕುಸಿತ, ಆಹಾರ ಭದ್ರತೆ ಪ್ರಮಾಣ, ಕುಸಿತ, ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ವಹಿವಾಟು ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಮತದಾರರು ತಿರುಗಿ ಬೀಳಬಹುದು ಎಂಬ ಕಾರಣಕ್ಕೆ ವಿವಿಧ ಕಾಯ್ದೆ ಜಾರಿ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಸಾಮಾನ್ಯರಿಗೆ ಮಾರಕವಾಗಿರುವ ಕಾಯ್ದೆಗೆ ಜೆ.ಡಿ.ಎಸ್ ಪಕ್ಷದ ವಿರೋಧವಿದೆ. ಮುಸ್ಲಿಮ್ ಸಮುದಾಯ ಸೇರಿದಂತೆ ಯಾವುದೇ ಸಮುದಾಯ ವಿರೋಧಿಸಿದರು ನಮ್ಮ ಬೆಂಬಲವಿದೆ ಎಂದು ಹೇಳಿದರು.

ಮುಖಂಡ ಡಾ.ಅನಿಲ್ ಕುಮಾರ್ ಮಾತನಾಡಿ, ‘ಪೌರತ್ವ ತಿದ್ದುಪಡಿ ಕಾಯ್ದೆ, ಪೌರತ್ವ ನೋಂದಣಿ ಮತ್ತು ಜಾತಿಗಣತಿ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವ ಕೇಂದ್ರ ಸರ್ಕಾರದ ಬ್ರಹ್ಮಾಸ್ತ್ರಗಳು. ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಗಣತಿ ಅವಶ್ಯಕತೆ ಇಲ್ಲ. ಏಪ್ರಿಲ್‌ನಲ್ಲಿ ನೋಂದಣಿ ಆರಂಭವಾಗಲಿದೆ. ಅರ್ಜಿಯಲ್ಲಿ 21 ಕ್ಕೂ ಹೆಚ್ಚು ಕಲಂಗಳಿಗೆ ಮಾಹಿತಿ ನೀಡಬೇಕು. ನೀವು ಏನು ಹೇಳುತ್ತಿರೋ ಅದನ್ನು ಬರೆದುಕೊಂಡ ನಂತರ ಅದಕ್ಕೆ ಪೂರಕ ದಾಖಲೆ ನೀಡಬೇಕು’ ಎಂದು ವಿವರಿಸಿದರು.

ಕೆ.ಪಿ.ಸಿ.ಸಿ ಹಿಂದುಳಿದ ವರ್ಗ ರಾಜ್ಯ ಘಟಕ ಉಪಾಧ್ಯಕ್ಷ ಸಿ.ಜಗನ್ನಾಥ್, ಕಾರ್ಯದರ್ಶಿ ಎಸ್.ರವಿಕುಮಾರ್, ಕೆ.ಪಿ.ಸಿ.ಸಿ ಸದಸ್ಯ ಚಿನ್ನಪ್ಪ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಸದಸ್ಯರಾದ ಅನಂತಕುಮಾರಿ, ರಾಧಮ್ಮ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚೈತ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡರಾದ ಮುನಿನರಸಿಂಹಯ್ಯ, ಲಕ್ಷ್ಮಣ್ ಗೌಡ, ಮಾರುತಿ, ಮುಸ್ಲಿಮ್ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.