ADVERTISEMENT

ಬೆಂಗಳೂರು ಗ್ರಾಮಾಂತರ: ಆನ್‌ಲೈನ್ ಔಷಧ ಮಾರಾಟಕ್ಕೆ ಅವಕಾಶಕ್ಕೆ ಆಕ್ಷೇಪ

ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 13:06 IST
Last Updated 28 ಸೆಪ್ಟೆಂಬರ್ 2018, 13:06 IST
ತಾಲ್ಲೂಕು ಕಚೇರಿ ಮುಂದೆ ಔಷಧಿ ಮಾರಾಟಗಾರರು ಪ್ರತಿಭಟನೆ ನಡೆಸಿದರು
ತಾಲ್ಲೂಕು ಕಚೇರಿ ಮುಂದೆ ಔಷಧಿ ಮಾರಾಟಗಾರರು ಪ್ರತಿಭಟನೆ ನಡೆಸಿದರು   

ದೊಡ್ಡಬಳ್ಳಾಪುರ: ಆನ್‌ಲೈನ್‌ ಮೂಲಕ ಔಷಧಿ ಮಾರಾಟಕ್ಕೆ ಅವಕಾಶ ನೀಡಲು ಕಾನೂನಿಗೆ ತಿದ್ದುಪಡಿ ತರಲು ಕರಡು ನೀತಿಯನ್ನು ರೂಪಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಶುಕ್ರವಾರ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಎನ್.ಸಿ. ಪಟಾಲಯ್ಯ, ತಾಲ್ಲೂಕು ಅಧ್ಯಕ್ಷ ಡಿ.ಎಸ್. ಸಿದ್ದಣ್ಣ ಮಾತನಾಡಿ, ಔಷಧ ಮಾರಾಟಗಾರರಿಗೆ ಮಾರಕವಾಗಿರುವ ಹಾಗೂ ಔಷಧ ಮಾರಾಟ ಕಾನೂನಿಗೆ ವಿರುದ್ಧವಾಗಿ ರೂಪಿಸಲಾಗಿರುವ ಆನ್‌ಲೈನ್ ಮಾರಾಟ ವ್ಯವಸ್ಥೆಯನ್ನು ವಿರೋಧಿಸಿ ಇಡೀ ದೇಶದಲ್ಲಿಯೇ ಮಳಿಗೆಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ಆನ್‌ಲೈನ್ ಮೂಲಕ ಔಷಧಿ ಮಾರಾಟಕ್ಕಾಗಿ ಇ-ಫಾರ್ಮಸಿಗೆ ಅನುಮತಿ ನೀಡಲು ಕಾನೂನು ತಿದ್ದುಪಡಿ ತರಲು ಮುಂದಾಗಿದೆ. ಈ ಕಾನೂನು ಔಷಧಿ ಮಾರಾಟಗಾರರಿಗೆ ಹಾಗೂ ಸಾರ್ವಜನಿಕರಿಗೂ ತೊಂದರೆಯಾಗಲಿದೆ. ವೈದ್ಯರ ಶಿಫಾರಸಿನ ಚೀಟಿ ಇಲ್ಲದೆ ಔಷಧಿಯನ್ನು ಮಾರಾಟ ಮಾಡುವಂತಿಲ್ಲ. ಕೇಂದ್ರ ಸರ್ಕಾರ 1945ರ ಔಷಧ ಮತ್ತು ಸೌಂದರ್ಯ ವರ್ಧಕ ನಿಯಂತ್ರಣ ಕಾಯ್ದೆಗೆ ತಿದ್ದುಪಡಿಯನ್ನು ತರುತ್ತಿರುವುದನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಆನ್‌ಲೈನ್ ಮೂಲಕ ಔಷಧಿ ಮಾರಾಟದಿಂದ ಜನರ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದನ್ನು ಸಾರ್ವಜನಿಕರಿಗೆ ಅರ್ಥ ಮಾಡಿಸಲಾಗುವುದು. ಕೇಂದ್ರ ಸರ್ಕಾರ ಜನರ ಪ್ರಾಣದ ಜೊತೆಗೆ ಚಲ್ಲಾವಾಡಲು ಹೊರಟಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಸಿ. ಶಶಿಧರ್, ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಜಿ.ಎಸ್. ಶಿವಕುಮಾರ್, ಖಜಾಂಚಿ ಟಿ.ಡಿ. ಶ್ಯಾಮ್ ಸುಂದರ್, ಉಪಾಧ್ಯಕ್ಷ ಕೆ.ಎಲ್. ಉಮೇಶ್, ಜಂಟಿ ಕಾರ್ಯದರ್ಶಿ ವಿಜಯಕುಮಾರ್, ಡಿ.ಎಸ್. ಶಶಿಧರ್, ಸಹ ಕಾರ್ಯದರ್ಶಿ ನಾಗೇಂದ್ರಪ್ಪ, ಸಹ ಖಜಾಂಚಿ ರಹೀಂ ಖಾನ್, ನಿರ್ದೇಶಕರಾದ ಕೆ.ಎಸ್. ಹೇಮಂತ್ ಕುಮಾರ್, ಕೆಂಪಣ್ಣ, ಸಿ.ರಜನೀಶ್, ಜಗನ್ನಾಥ್ ಸೇರಿದಂತೆ ಸಂಘದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.