ADVERTISEMENT

ಉಳ್ಳೇರಹಳ್ಳಿ ಪ್ರಕರಣ ಖಂಡಿಸಿ ಪ್ರತಿಭಟನೆ

ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆಯಿಂದ ಹಕ್ಕೊತ್ತಾಯ ಮಂಡನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 5:43 IST
Last Updated 29 ಸೆಪ್ಟೆಂಬರ್ 2022, 5:43 IST
ದೊಡ್ಡಬಳ್ಳಾಪುರದಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ನೇತೃತ್ವದಲ್ಲಿ ದಲಿತರ ಮೇಲೆ ಜಾತಿ ಕಾರಣಕ್ಕಾಗಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ತಾಲ್ಲೂಕು ಕಚೇರಿ ಮುಂದೆ ಬುಧವಾರ ಗುಜ್ಜು ಕೋಲು ಹಿಡಿದುಕೊಂಡು ಪ್ರತಿಭಟನೆ ನಡೆಯಿತು
ದೊಡ್ಡಬಳ್ಳಾಪುರದಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ನೇತೃತ್ವದಲ್ಲಿ ದಲಿತರ ಮೇಲೆ ಜಾತಿ ಕಾರಣಕ್ಕಾಗಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ತಾಲ್ಲೂಕು ಕಚೇರಿ ಮುಂದೆ ಬುಧವಾರ ಗುಜ್ಜು ಕೋಲು ಹಿಡಿದುಕೊಂಡು ಪ್ರತಿಭಟನೆ ನಡೆಯಿತು   

ದೊಡ್ಡಬಳ್ಳಾಪುರ:ಕೋಲಾರ ಜಿಲ್ಲೆಯ ಉಳ್ಳೇರಹಳ್ಳಿಯಲ್ಲಿ ದಲಿತ ಬಾಲಕ ಹಾಗೂ ಅವರ ಕುಟುಂಬದ ಮೇಲೆ ನಡೆದಿರುವ ದೌರ್ಜನ್ಯ ಹಾಗೂ ರಾಜ್ಯದ ವಿವಿಧೆಡೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ನೇತೃತ್ವದಲ್ಲಿ ಬುಧವಾರ ತಾಲ್ಲೂಕು ಕಚೇರಿ ಮುಂದೆ ಗುಜ್ಜುಕೋಲು ಹಿಡಿದುಕೊಂಡು ಪ್ರತಿಭಟನೆ ನಡೆಯಿತು.

ಬಳಿಕ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಹಕ್ಕೊತ್ತಾಯ ಸಲ್ಲಿಸಲಾಯಿತು.

ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ಸಂಚಾಲಕ ರಾಜು ಸಣ್ಣಕ್ಕಿ ಮತ್ತು ಛಲವಾದಿ ಮಹಾಸಭಾ ಅಧ್ಯಕ್ಷ ಸಿ. ಗುರುರಾಜಪ್ಪ ಮಾತನಾಡಿ, ಉಳ್ಳೇರಹಳ್ಳಿಯ ಭೂತಮ್ಮದೇವಿ ಜಾತ್ರೆಯ ದೇವರ ಮೆರವಣಿಗೆ ಸಂದರ್ಭದಲ್ಲಿ ಬಿದ್ದು ಹೋದ ಗುಜ್ಜು ಕೋಲು ಎತ್ತಿಕೊಟ್ಟ ಚೇತನ್ ಎಂಬ ಬಾಲಕ ಪರಿಶಿಷ್ಟ ಜಾತಿಗೆ ಸೇರಿದವನೆಂಬ ಕಾರಣಕ್ಕೆ ಗ್ರಾಮದ ಬಲಾಢ್ಯರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ದೇವರ ಶುದ್ಧೀಕರಣಕ್ಕೆ ಬಾಲಕನ ಕುಟುಂಬ ₹ 60 ಸಾವಿರ ದಂಡ ಕೊಡಬೇಕು. ಇಲ್ಲವಾದರೆ ಊರಿನಿಂದ ಬಹಿಷ್ಕಾರಕ್ಕೆ ಒಳಗಾಗಬೇಕು ಎನ್ನುವ ಅಮಾನವೀಯ ಕೃತ್ಯ ನಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದು
ದೂರಿದರು.

ADVERTISEMENT

ಎಸ್‌.ಸಿ, ಎಸ್‌.ಟಿಗಳೆಂಬ ಕಾರಣಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕನಕೇನಹಳ್ಳಿಯಲ್ಲಿ ದಲಿತರ ಗುಡಿಸಲಿಗೆ ಬೆಂಕಿ ಹಚ್ಚಲಾಗಿದೆ. ಹೀರೇಮುದ್ದೇನಹಳ್ಳಿಯಲ್ಲಿ ದಲಿತ ಮಹಿಳೆಯ ಹತ್ಯೆ ನಡೆದಿದೆ. ಚಿಕ್ಕಮಂಗಳೂರಿನಲ್ಲಿ ದಲಿತ ಯುವಕನನ್ನು ಮದುವೆಯಾಗಲು ಹೊರಟ ಯುವತಿಗೆ ಅಡ್ಡಿಪಡಿಸಲಾಗಿದೆ. ತುಮಕೂರು ಜಿಲ್ಲೆಯ ಪೆದ್ದನಹಳ್ಳಿಯಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆಯಾಗಿದೆ. ಆದರೂ ಸರ್ಕಾರ ಕ್ರಮವಹಿಸಿಲ್ಲ ಎಂದು
ದೂರಿದರು.

ಹಾಸನದಲ್ಲಿ ದನ ತನ್ನ ಮೇಲೆ ಎರಗುತ್ತಿದ್ದು ಹಿಡಿದುಕೊಳ್ಳಿ ಎಂದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಕೊಪ್ಪಳದಲ್ಲಿ ಎರಡು ವರ್ಷದ ಮಗು ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ₹ 25 ಸಾವಿರ ದಂಡ ಹಾಕಲಾಗಿದೆ. ಟೀ ಕುಡಿಯಲು ಹೋಟೆಲ್‍ಗೆ ಹೋದ ಯುವಕನ ಬೈಕ್ ಮೇಲೆ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇದೆ ಎಂಬ ಕಾರಣಕ್ಕೆ ಹೊರದಬ್ಬಲಾಗಿದೆ. ಈ ಘಟನೆಗಳನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಇಂತಹ ಅಮಾನುಷ ಘಟನೆಗಳು ಮರುಕಳಿಸಬಾರದು ಎಂದು ಆಗ್ರಹಿಸಿದರು.

ಜಾತಿ ದೌರ್ಜನ್ಯಗಳು ನಡೆದ ತಕ್ಷಣ ಆ ಸರಹದ್ದಿನ ಪೊಲೀಸರು ಎಫ್‍ಐಆರ್ ದಾಖಲಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಜಾತಿ ದೌರ್ಜನ್ಯದಿಂದ ನಲುಗಿದ ಕುಟುಂಬಗಳಿಗೆ ಐದು ಎಕರೆ ಭೂಮಿ ಮಂಜೂರು ಮಾಡಿ ಕುಟುಂಬದ ಅರ್ಹ ವ್ಯಕ್ತಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಬಾಧಿತ ಕುಟುಂಬಗಳಿಗೆ ವ್ಯಾಜ್ಯ ಇತ್ಯರ್ಥವಾಗುವ ತನಕ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು. ಜಾತಿ ಹೆಸರಲ್ಲಿ ಯಾವುದೇ ದೌರ್ಜನ್ಯ ಮಾಡುವ ವ್ಯಕ್ತಿಗಳಿಗೆ ಒಂದು ವರ್ಷಕಾಲ ಜಾಮೀನು ನೀಡದಂತೆ ಮಾಡಲು ದಲಿತ ದೌರ್ಜನ್ಯ ತಡೆ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಿ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಯಿತು.

ಪ್ರತಿಭಟನೆಯಲ್ಲಿ ಕನ್ನಡ ಜಾಗೃತ ಪರಿಷತ್‌ ಕಾರ್ಯದರ್ಶಿ ಡಿ.ಪಿ. ಆಂಜನೇಯ, ಕನ್ನಡ ಪಕ್ಷದ ಅಧ್ಯಕ್ಷ ವೆಂಕಟೇಶ್, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಂಜಪ್ಪ, ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಗೂಳ್ಯ ಹನುಮಣ್ಣ, ಕಾರ್ಮಿಕ ಘಟಕದ ಅಶೋಕ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಮುಖಂಡ ಸುರೇಶ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.