ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಭ್ರಷ್ಟ ಅಧಿಕಾರಿಗಳ ಅಮಾನತಿಗೆ ಒತ್ತಾಯ * ನೀಲಿಮಯವಾದ ಆನೇಕಲ್‌ನ ಪ್ರಮುಖ ವೃತ್ತಗಳು * ಮೊಳಗಿದ ಜೈಭೀಮ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 18:48 IST
Last Updated 11 ಜುಲೈ 2025, 18:48 IST
ಆನೇಕಲ್‌ ಪಟ್ಟಣದಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಆನೇಕಲ್‌ ಪಟ್ಟಣದಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ   

ಆನೇಕಲ್: ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದಲ್ಲಿ ಶುಕ್ರವಾರ ವಿವಿಧ ಸಂಘಟನೆಗಳ ಮುಖಂಡರು ಅರೆಬೆತ್ತಲೆ ಮೆರವಣಿಗೆ ನಡೆಸಿದರು ಮತ್ತು ಪೊರಕೆಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ದಲಿತರ ಭೂಮಿಯ ಅಕ್ರಮ ಆದೇಶಗಳನ್ನು ಮಾಡಿರುವ ಉಪವಿಭಾಗಾಧಿಕಾರಿ ಅಪೂರ್ವ ಬಿದರಿ ಅವರನ್ನು ಅಮಾನತು ಮಾಡಬೇಕು. ಇವರ ಅವಧಿಯಲ್ಲಿ ನಡೆದಿರುವ ಎಲ್ಲಾ ಪ್ರಕರಣಗಳನ್ನು ನಿವೃತ್ತ ನ್ಯಾಯಾಧೀಶರರಿಂದ ಮರುತನಿಖೆ ಮಾಡಬೇಕು. ಭ್ರಷ್ಟ ಕಂದಾಯ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬೃಹತ್‌ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ನೀಲಿ ಧ್ವಜಗಳನ್ನು ಹಿಡಿದು ಪಾಲ್ಗೊಂಡಿದ್ದರು. ಜೈಭೀಮ್‌ ಘೋಷಣೆ, ಪೊರಕೆ ಹಿಡಿಯೋಣ ಭ್ರಷ್ಟರ ಗುಡಿಸೋಣ  ಘೋಷಣೆಗಳು ಮೊಳಗಿದವು. ತಮಟೆ ಸದ್ದಿನೊಂದಿಗೆ ಪ್ರತಿಭಟನಾಕಾರರು ಪೊರಕೆ ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯಿಂದಾಗಿ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಪಟ್ಟಣದ ಪ್ರಮುಖ ವೃತ್ತಗಳು ನೀಲಿಮಯವಾಗಿದ್ದವು. ಕಾರ್ಯಕರ್ತರು ಶಿವಾಜಿ ವೃತ್ತದಿಂದ ತಾಲ್ಲೂಕು ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ ಸಾಗಿತು.

ADVERTISEMENT

ಸಂಘಟನೆಯ ಚಿಕ್ಕನಾಗಮಂಗಲ ವೆಂಕಟೇಶ್‌ ಮಾತನಾಡಿ, ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಅಪೂರ್ವ ಬಿದರಿ ಅವರ ಅಕ್ರಮ ಆದೇಶಗಳಿಂದಾಗಿ ಬಡವರಿಗೆ, ದಲಿತರಿಗೆ ಮತ್ತು ರೈತರಿಗೆ ತೊಂದರೆಯಾಗಿದೆ. ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟ ಅಧಿಕಾರಿಗಳೇ ಹೆಚ್ಚಾಗಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಬಡವರು ಮತ್ತು ದಲಿತರಿಗೆ ಬೆಲೆಯಿಲ್ಲದಂತಾಗಿದೆ. ತಮ್ಮ ಕೆಲಸ ಕಾರ್ಯಗಳಿಗಾಗಿ ಲಕ್ಷಾಂತರ ಹಣ ನೀಡಬೇಕಾದ ಪರಿಸ್ಥಿತಿಯಾಗಿದೆ. ಈ ನಿಟ್ಟಿನಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಸಲುವಾಗಿ ಪೊರಕೆ ಚಳವಳಿ ಆಯೋಜಿಸಲಾಗಿದೆ. ಪೊರಕೆ ಹಿಡಿಯೋಣ ಭ್ರಷ್ಠರ ಗುಡಿಸೋಣ ಎಂಬ ಘೋಷವಾಕ್ಯದಡಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ.  ಅಪೂರ್ವ ಬಿದಗರಿ ಅವರನ್ನು ಸೇವೆಯಿಂದ ವಜಾ ಮಾಡುವವರೆಗೂ ಪ್ರತಿಭಟನೆ ಮುಂದುವರೆಯುತ್ತದೆ ಎಂದರು.

ವಕೀಲ ಆನಂದ ಚಕ್ರವರ್ತಿ ಮಾತನಾಡಿ, ಭ್ರಷ್ಟರ ವಿರುದ್ಧದ ಪ್ರತಿಭಟನೆ ಶಾಂತಿಯುತವಾಗಿ ನಡೆಸಲಾಗುತ್ತಿದೆ. ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಗಳು ಬರಬೇಕು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವವರೆಗೂ ಪ್ರತಿಭಟನೆ ಮುಂದುವರೆಯುತ್ತದೆ. ಆದರೆ, ಪೊಲೀಸರು ಏಕಾಏಕಿ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದು ತಿಳಿಸಿದರು.

ದಲಿತರ ಭೂಮಿಯ ಅಕ್ರಮ ಆದೇಶ ನೀಡಿರುವ ಉಪವಿಭಾಗಾಧಿಕಾರಿಗಳ ಕ್ರಮವನ್ನು ನಿವೃತ್ತ ನ್ಯಾಯಾಧೀಶರು ತನಿಖೆ ನಡೆಸಬೇಕು. ಸರ್ಜಾಪುರ ಹೋಬಳಿ ಚಿಕ್ಕನಾಗಮಂಗಲದಲ್ಲಿ ಖಾತೆ ಮಾಡಲು ಲಂಚ ಕೇಳುತ್ತಿರುವ ತಾಲ್ಲೂಕು ಕಚೇರಿಯ ಅಧಿಕಾರಿಗಳನ್ನು ವಜಾಗೊಳಿಸಬೇಕು. ಆನೇಕಲ್‌ ತಾಲ್ಲೂಕಿನ ವಿವಿಧ ಪೊಲೀಸ್‌ ಠಾಣೆಯಲ್ಲಿ ಐದು ವರ್ಷಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವವರನ್ನು ವರ್ಗಾಯಿಸಬೇಕು. ಅಂಬೇಡ್ಕರ್‌ ಪ್ರತಿಮೆಯನ್ನು ಕಡೆಗಣಿಸಿರುವ ಬಳ್ಳೂರು ಗ್ರಾಮ ಪಿಡಿಓ ಅವರ ವಿರುದ್ಧ ಕ್ರಮ ವಹಿಸಬೇಕು. ಬಾಡರಹಳ್ಳಿಯಲ್ಲಿ ಸ್ಮಶಾನ ನಿರ್ಮಾಣಕ್ಕೆ ವ್ಯವಸ್ಥೆ ಮಾಡಬೇಕು. 94ಸಿ ಅಡಿಯಲ್ಲಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿರುವ ಅರ್ಹರಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.

ರಾವಣ, ವೆಂಕಟೇಶ್‌ ಮೂರ್ತಿ, ಸುರೇಶ್‌ ಪೋತಾ, ಡಿ.ವೆಂಕಟೇಶ್, ಆದೂರು ಪ್ರಕಾಶ್‌, ಪಾಪಮ್ಮ, ತ್ರಿಪುರ ಸುಂದರಿ, ಸಿ.ನಾರಾಯಣಪ್ಪ, ನಾಗರಾಜು ಮೌರ್ಯ, ಬ್ಯಾಟರಾಜು, ರಾಮಸ್ವಾಮಿ, ಗೌರೀಶ್‌, ಅರೇಹಳ್ಳಿ ಮಧು, ಇಂಡ್ಲವಾಡಿ ಮಂಜುನಾಥ್‌, ಇಗ್ಗಲೂರು ನಾಗೇಂದ್ರ ಇದ್ದರು.

ಆನೇಕಲ್‌ ಪಟ್ಟಣದಲ್ಲಿ ಭ್ರಷ್ಠ ಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿ ಕಾರ್ಯಕರ್ತರು ಪೊರಕೆ ಮತ್ತು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.