ADVERTISEMENT

ಮನೆ, ಕೆಲಸದ ಸ್ಥಳದಲ್ಲಿ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮೇ 2021, 3:44 IST
Last Updated 22 ಮೇ 2021, 3:44 IST
ಕೂಲಿ ಕಾರ್ಮಿಕರು ಮನೆ ಸಮೀಪವೇ ಪ್ರತಿಭಟನೆ ನಡೆಸಿದರು
ಕೂಲಿ ಕಾರ್ಮಿಕರು ಮನೆ ಸಮೀಪವೇ ಪ್ರತಿಭಟನೆ ನಡೆಸಿದರು   

ದೊಡ್ಡಬಳ್ಳಾಪುರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾರ್ವತ್ರಿಕ ಮತ್ತು ಉಚಿತ ಲಸಿಕೆ ನೀಡಲು ಹಾಗೂ ಕಾರ್ಮಿಕರು, ರೈತರು ಮತ್ತು ಕೃಷಿ ಕೂಲಿಕಾರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕರ್ನಾಟಕ ಪ್ರಾಂತರೈತ ಸಂಘ(ಕೆಪಿಆರ್‍ಎಸ್), ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿ ಕರೆ ನೀಡಿದ್ದ ಪ್ರತಿಭಟನೆ ಬೆಂಬಲಿಸಿ ತಾಲ್ಲೂಕಿನಲ್ಲಿ, ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ಮನೆ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿಯೇ ಪ್ರತಿಭಟನಾ ಕರಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ. ವೆಂಕಟೇಶ್, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಈ ಕುರಿತು ಮಾಹಿತಿ ನೀಡಿ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣವು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಆರೋಗ್ಯ ರಕ್ಷಣೆಗೆ ಬೇಕಾದ ಆಸ್ಪತ್ರೆ ಸೇರಿ ಆರೋಗ್ಯ ಸೌಲಭ್ಯಗಳ ಅಲಭ್ಯತೆಯಿಂದಾಗಿ ಜನಸಾಮಾನ್ಯರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವೈದ್ಯಕೀಯ ಸೌಲಭ್ಯಗಳ ಸಮಸ್ಯೆಗಳು ಒಂದುಕಡೆಯಾದರೆ, ಲಾಕ್‌ಡೌನ್‌
ನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿವೆ. ಎಲ್ಲಾ ವರ್ಗದ ಶ್ರಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಪ್ಯಾಕೇಜ್‍ನಲ್ಲಿ ನೇಕಾರರನ್ನು ಕಡೆಗಣಿಸಲಾಗಿದೆ ಎಂದರು.

ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲು ಪರೀಕ್ಷೆಗಳ ವ್ಯಾಪಕತೆಯನ್ನು ಹೆಚ್ಚಿಸಬೇಕು. ಅಗತ್ಯವಾದ ಬೆಡ್‍ಗಳು, ಔಷಧಿಗಳು, ಲಸಿಕೆ, ಆಮ್ಲಜನಕ, ವೆಂಟಿಲೇಟರ್ ವ್ಯವಸ್ಥೆಗಳನ್ನು ಸಮರೋ
ಪಾದಿಯಲ್ಲಿ ಒದಗಿಸಬೇಕು. ಅಗತ್ಯವಾದ ಹಣವನ್ನು ಕ್ರೋಢೀಕರಿಸಲು ತುರ್ತು ಅಲ್ಲದ ಬಂಡವಾಳ ವೆಚ್ಚದ ಯೋಜನೆ
ಗಳನ್ನು ಮುಂದೂಡಬೇಕು ಎಂದರು.

ADVERTISEMENT

ಲಸಿಕೆಯನ್ನು ಸಾರ್ವತ್ರಿಕವಾಗಿ ಹಾಗೂ ಉಚಿತವಾಗಿ ನೀಡಬೇಕು.ಕೋವಿಡ್ ಆತಂಕದ ಸಂದರ್ಭಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಕಾಳಸಂತೆಕೋರರ ಮೇಲೆ ತೀವ್ರವಾದ ಕ್ರಮಕೈಗೊಳ್ಳಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾವಣೆಯಾಗಿರುವ ಎಲ್ಲಾ ಫಲಾನುಭವಿಗಳಿಗೆ ವಾರಕ್ಕೆ ₹2,500ರಂತೆ ಮಾಸಿಕ ₹ 10 ಸಾವಿರ ಪರಿಹಾರ ಒದಗಿಸಬೇಕು ಎಂದರು.

ಕೈಗಾರಿಕಾ ಕಾರ್ಮಿಕರಿಗೆ ಹಾಗೂ ಸಂಘಟಿತ ಕಾರ್ಮಿಕರಿಗೆ ಲಾಕ್‌ಡೌನ್‌ ಅವಧಿಯಲ್ಲಿ ನೀಡಲಾಗುವ ರಜೆಗಳನ್ನು ಸಂಬಳ ಸಹಿತ ರಜೆ ಎಂದು ಘೋಷಿಸಬೇಕು. ರೈತರ ಬೆಳೆಗೆ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು.ಗ್ರಾಮೀಣ ಉದ್ಯೋಗ ಖಾತ್ರಿ ಅಡಿಯಲ್ಲಿ ಕೃಷಿ ಕೂಲಿಕಾರರಿಗೆ ಕನಿಷ್ಟ 200 ದಿನಗಳ ಉದ್ಯೋಗವನ್ನು ನೀಡಬೇಕು.ದಿನದ ಕೂಲಿಯನ್ನು ₹700 ಗಳಿಗೆ ಹೆಚ್ಚಿಸಬೇಕು ಎಂದರು.

ಕರ್ನಾಟಕ ರಾಜ್ಯದ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ.ಆಹಾರ ಧಾನ್ಯವನ್ನು ಆರು ತಿಂಗಳ ಕಾಲ ಪಡಿತರ ವ್ಯವಸ್ಥೆ ಮೂಲಕ ಉಚಿತವಾಗಿ ನೀಡಬೇಕು. ಪ್ರತಿಯೊಬ್ಬರಿಗೂ 10ಕೆ.ಜಿ. ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಬೇಕೆಂಬ ರಾಜ್ಯದ ಹೈಕೋರ್ಟ್‌ ನೀಡಿರುವ ಸೂಚನೆಯನ್ನು ರಾಜ್ಯ ಸರ್ಕಾರವು ಪಾಲಿಸಬೇಕು.ನೇಕಾರರಿಗೆ ಹೆಚ್ಚಿನ ಪ್ಯಾಕೇಜ್ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.