ADVERTISEMENT

ಪಿಎಸ್‌ಐ ಜಗದೀಶ್ ಹತ್ಯೆ: ಇಬ್ಬರಿಗೆ ಶಿಕ್ಷೆ–ಮೂವರ ಖುಲಾಸೆ

ಶಿಕ್ಷೆ ಪ್ರಕಟಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2024, 8:23 IST
Last Updated 9 ಏಪ್ರಿಲ್ 2024, 8:23 IST
ಜಗದೀಶ್‌
ಜಗದೀಶ್‌   

ದೊಡ್ಡಬಳ್ಳಾಪುರ: ಒಂಬತ್ತು ವರ್ಷಗಳ ಹಿಂದೆ ನಡೆದ ನಗರ ಪೊಲೀಸ್ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಜಗದೀಶ್ ಹತ್ಯೆ ಪ್ರಕರಣದ ಐವರು ಆರೋಪಿಗಳ ಪೈಕಿ ಮೂವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ. ಇಬ್ಬರಿಗೆ ಶಿಕ್ಷೆ ಪ್ರಕಟಿಸಿದೆ.

ರಘು, ತಿಮ್ಮಕ್ಕ, ಯಲಾಲ ಹನುಮಂತರಾವ್ ಅವರನ್ನು ನ್ಯಾಯಾದೀಶ ರಘುನಾಥ್ ಖುಲಾಸೆಗೊಳಿಸಿದ್ದಾರೆ. ಮಧು ಎಂಬಾತನಿಗೆ ಏಳು ವರ್ಷ ಶಿಕ್ಷೆ ಹಾಗೂ ₹1 ಲಕ್ಷ ದಂಡ ಹಾಗೂ ಹರೀಶ್‌ ಬಾಬು ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ₹3 ಲಕ್ಷ ದಂಡ ವಿಧಿಸಲಾಗಿದೆ.  

2015 ಅಕ್ಟೋಬರ್ 16 ರಂದು ನಗರ ಪೊಲೀಸ್ ಠಾಣೆ ಸಬ್‌ಇನ್‌ಸ್ಪಕ್ಟರ್‌ ಜಗದೀಶ್‌ ಅವರು ಸಿಬ್ಬಂದಿ ಜೊತೆ ಕಳ್ಳರನ್ನು ಬಂಧಿಸಲು ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶ್ವರ ಕಲ್ಯಾಣ ಪಂಟಪದ ಬಳಿಯ ಟರ್ಬೋ ಹೊಂಡಾ ಷೊ ರೂಂ ಹತ್ತಿರ ಹೋಗಿದ್ದರು.

ADVERTISEMENT

ಕಳ್ಳತನ ಮಾಡುತ್ತಿದ್ದ ಕೃಷ್ಣಪ್ಪ ಮತ್ತು ಮಧು ಎಂಬ ತಂದೆ, ಮಗನನ್ನು ಬೆನ್ನು ಹತ್ತಿದ ಜಗದೀಶ್ ಅವರನ್ನು ರಸ್ತೆ ಪಕ್ಕದ ಚರಂಡಿಗೆ ನೂಕಿದ ಮಧು, ಸರ್ವಿಸ್‌ ಪಿಸ್ತೂಲ್ ಕಸಿದುಕೊಂಡು ನಂತರ ಚಾಕುವಿನಿಂದ ಪಕ್ಕೆಗೆ ಐದಾರು ಬಾರಿ ಇರಿದ್ದಿದ್ದ. ಇದರಿಂದ ಜಗದೀಶ್‌ ಮೃತಪಟ್ಟಿದ್ದರು.

ಕಾನ್‌ಸ್ಟೇಬಲ್‌ ವೆಂಕಟೇಶ್‌ಕುಮಾರ್ ಎಂಬುವರಿಗೂ ಚಾಕುವಿನಿಂದ ಇರಿದು, ಪಿಎಸ್‌ಐ ಅವರ ಸರ್ವಿಸ್‌ ಪಿಸ್ತೂಲ್‌ನೊಂದಿಗೆ ಪರಾರಿಯಾಗಿದ್ದರು.

ಘಟನೆ ನಂತರ ರೈಲಿನಲ್ಲಿ ಪರಾರಿಯಾಗಿದ್ದ ಆರೋಪಿಗಳನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿ ಕರೆತರಲಾಗಿತ್ತು. ನೆಲಮಂಗಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ನೆಲಮಂಗಲ ಉಪವಿಭಾಗದ ಡಿವೈಎಸ್‌ಪಿ ರಾಜೇಂದ್ರಕುಮಾರ್,  ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿದ್ದರು.ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಮೀನಾಕುಮಾರಿ, ಎಸ್‌.ವಿ.ಭಟ್‌ ವಾದಿಸಿದ್ದರು. 

ಹತ್ಯೆಗೀಡಾದ ಪಿಎಸ್‌ಐ ಜಗದೀಶ್‌ ಅವರ ಪತ್ನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

* ಐವರು ಆರೋಪಿಗಳಲ್ಲಿ ಮೂವರ ಖುಲಾಸೆ * ಇಬ್ಬರಿಗೆ ಶಿಕ್ಷೆ, ದಂಡ * ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ

ಶಿಕ್ಷೆ ಬೇಸರ ತರಿಸಿದೆ  ಕರ್ತವ್ಯ ನಿರತ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರನ್ನು ಆರೋಪಿಗಳು ಸಾರ್ವಜನಿಕವಾಗಿ ಚಾಕುವಿನಿಂದ ಇರಿದು ಘೋರವಾಗಿ ಹತ್ಯೆ ಮಾಡಿದ್ದರು. ಸಾಮಾನ್ಯ ಅಪರಾಧದ ಆರೋಪಿಗಳಿಗೆ ವಿಧಿಸುವಂತಹ ಶಿಕ್ಷೆಯಾಗಿರುವುದು ಬೇಸದ ಸಂಗತಿಯಾಗಿದೆ.ಇದರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗಲಿದೆ. -ರಾಜಘಟ್ಟ ರವಿ ಅಧ್ಯಕ್ಷ ಹುತಾತ್ಮ ಪಿಎಸ್‌ಐ ಜಗದೀಶ್‌ ಪೌಂಡೇಷನ್‌ ಟ್ರಸ್ಟ್‌. ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ  ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಈಗ ನ್ಯಾಯಾಲಯ ನೀಡಿರುವ ತೀರ್ಪು ಅಸಮಧಾನ ತಂದಿದೆ. ಈ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. -ಶ್ರೀನಿವಾಸ್‌ ಹತ್ಯೆಗೀಡಾದ ಪಿಎಸ್‌ಐ ಜಗದೀಶ್‌ ತಂದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.