ADVERTISEMENT

ಪಕ್ಷಕ್ಕೆ ದ್ರೋಹ ಮಾಡಿರುವ ಪುಟ್ಟಣ್ಣ: ಎ.ಪಿ.ರಂಗನಾಥ್‌

ಬೆಂಗಳೂರು ಶಿಕ್ಷಕ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಚುನಾವಣಾ ಪ್ರಚಾರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 14:06 IST
Last Updated 25 ಫೆಬ್ರುವರಿ 2020, 14:06 IST
ನಗರದ ಪರೀವೀಕ್ಷಣ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎ.ಪಿ. ರಂಗನಾಥ್‌ ಮಾತನಾಡಿದರು
ನಗರದ ಪರೀವೀಕ್ಷಣ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎ.ಪಿ. ರಂಗನಾಥ್‌ ಮಾತನಾಡಿದರು   

ಕನಕಪುರ: ‘ಸರ್ಕಾರವನ್ನು ಕೆಡವಿದ್ದು ನಾವೇ, ನಮ್ಮ ಶಕ್ತಿ ಏನೆಂದು ತೋರಿಸಿದ್ದೀವಿ ಎಂದು ಹೇಳುವ ನಾಯಕರಿಗೆ ಶಿಕ್ಷಕರ ಸಮಸ್ಯೆ ಬಗೆಹರಿಸುವ ಶಕ್ತಿ ಇರಲಿಲ್ಲವೆ’ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎ.ಪಿ.ರಂಗನಾಥ್‌ ಪ್ರಶ್ನಿಸಿದರು.

ಇಲ್ಲಿನ ಪರಿವೀಕ್ಷಣ ಮಂದಿರದಲ್ಲಿ ಬೆಂಗಳೂರು ಶಿಕ್ಷಕ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ಜೆಡಿಎಸ್‌ ಮುಖಂಡರುಗಳೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ಪುಟ್ಟಣ್ಣ ಅವರನ್ನು ಕಟಕಿದರು.

‘ಜೆಡಿಎಸ್‌ ಪಕ್ಷದಲ್ಲಿದ್ದುಕೊಂಡು ದೇವೇಗೌಡರು, ಕುಮಾರಸ್ವಾಮಿ ಅವರ ಆಶೀರ್ವಾದದಿಂದ 18 ವರ್ಷಗಳ ಕಾಲ ಅಧಿಕಾರ ಅನುಭವಿಸಿ, ಉಪ ಸಭಾಪತಿಯಾಗಿ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ಬದಲು ಸಮಸ್ಯೆಯನ್ನು ಜೀವಂತವಾಗಿರಿಸಿದ್ದರು’ ಎಂದು ದೂರಿದರು.

ADVERTISEMENT

‘ಶಿಕ್ಷಕರ ಮುಂದೆ ಬಿಇಒಗಳನ್ನು ಕರೆದು ಬೈದು, ರಾತ್ರಿ ಅವರ ಜತೆ ಸೇರಿ ಸಮಾಲೋಚನೆ ನಡೆಸುತ್ತಿದ್ದರು. ಸಂಘಟನೆಗಳ ನಡುವೆ ಒಡಕು ಮೂಡಿಸಿ ಅದರ ಲಾಭ ಪಡೆದುಕೊಳ್ಳುತ್ತಿದ್ದರು. ಶಿಕ್ಷಕರಿಗೆ ನ್ಯಾಯಯುತವಾಗಿ ಕೊಡಿಸಬೇಕಿದ್ದ ಸವಲತ್ತುಗಳನ್ನು ತಪ್ಪಿಸಿ, ಸವಲತ್ತು ಕೊಡಿಸಲು ಹೋರಾಟ ನಡೆಸುತ್ತಿರುವುದಾಗಿ ಶಿಕ್ಷಕರನ್ನು ನಂಬಿಸುತ್ತಿದ್ದರು’ ಎಂದು ಆರೋಪಿಸಿದರು.

‘ಇವರ ಈ ಡೋಂಗಿ ಹೋರಾಟ, ಹೋರಾಟದ ಹೆಸರಲ್ಲಿ ಮಾಡಿರುವ ವಂಚನೆ ಎಲ್ಲವೂ ಶಿಕ್ಷಕರಿಗೆ ಗೊತ್ತಾಗಿದೆ. ಈ ಬಾರಿ ಶಿಕ್ಷಕರು ತಮ್ಮ ಶಕ್ತಿ ಏನೆಂಬುದನ್ನು ಇವರಿಗೆ ತೋರಿಸಲಿದ್ದಾರೆ’ ಎಂದು ಗುಡುಗಿದರು.

‘ಕನಕಪುರ ತಾಲ್ಲೂಕಿನಲ್ಲಿ ಜೆಡಿಎಸ್‌ನವರ ಬೆಂಬಲದಿಂದಲೇ ಹೆಚ್ಚಿನ ಮತಗಳನ್ನು ಪಡೆಯುತ್ತಿದ್ದರು. ತಾಲ್ಲೂಕಿಗೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜು ಸ್ಥಳಾಂತರಗೊಂಡಾಗ ಅದರ ವಿರುದ್ದ ಇವರು ತುಟಿ ಬಿಚ್ಚಲಿಲ್ಲ. ತಾಲ್ಲೂಕಿಗೆ ಒಂದು ಮೆಡಿಕಲ್‌ ಕಾಲೇಜು ಬಂದರೆ ಎಷ್ಟೊಂದು ಅನುಕೂಲವಾಗುತ್ತಿತ್ತು. ಮತದಾರರ ಋಣ ತೀರಿಸುವ ಕೆಲಸ ಮಾಡಿಲ್ಲ’ ಎಂದು ಆರೋಪಿಸಿದರು.

ಜೆಡಿಎಸ್‌ ಮುಖಂಡ ಚಿನ್ನಸ್ವಾಮಿ ಮಾತನಾಡಿ, ‘ಇಲ್ಲಿಯವರೆಗೂ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ತಾಲ್ಲೂಕಿನಿಂದ ಪಕ್ಷದ ಮೇಲೆ ಮತಗಳು ಬೀಳುತ್ತಿದ್ದವು. ವ್ಯಕ್ತಿಗತವಾಗಿ ಮತ ನೀಡಿಲ್ಲ. ಪುಟ್ಟಣ್ಣ ಪಕ್ಷ ಬಿಟ್ಟು ಹೋಗಿರುವುದರಿಂದ ಪಕ್ಷದ ಮತಗಳು ಪಕ್ಷದ ಅಧಿಕೃತ ಅಭ್ಯರ್ಥಿ ಎ.ಪಿ.ರಂಗನಾಥ್‌ ಅವರಿಗೆ ಸಂಪೂರ್ಣ ಬರಲಿವೆ. ಪಕ್ಷದ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲರೂ ದುಡಿಯುತ್ತೇವೆ’ ಎಂದರು.

ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ನಾಗರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಧನಂಜಯ, ನಗರಸಭೆ ಸದಸ್ಯರಾದ ಸ್ಟುಡಿಯೊ ಚಂದ್ರು, ನಾಗರಾಜು, ವಕೀಲರ ಸಂಘದ ಅಧ್ಯಕ್ಷ ಜಿ.ಎಸ್‌.ಗಿರಿಧರ್‌, ಮಾಜಿ ಅಧ್ಯಕ್ಷ ನಂಜೇಗೌಡ, ಖಜಾಂಜಿ ಪ್ರಸನ್ನ, ಹಿರಿಯ ವಕೀಲ ಚನ್ನೇಗೌಡ, ರಾಜಣ್ಣ, ಶಂಕರೇಗೌಡ, ಪಾರ್ಥಸಾರಥಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.