
ವಿಜಯಪುರ: ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೂ ಎಲ್ಲಾ ಮೂಲಸೌಕರ್ಯ ಹೊಂದಿರುವ ಉತ್ತಮ ಗುಣಮಟ್ಟದ ಒಂದು ಶಾಲೆ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ‘ನಮ್ಮ ಶಾಲೆ-ನಮ್ಮ ಹೆಮ್ಮೆ–80’ ಹಾಗೂ ಅಮೃತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿಗುಚ್ಚ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಕಾರ್ಪೋರೆಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ ₹400 ಕೋಟಿ ವೆಚ್ಚದಲ್ಲಿ ಜಿಲ್ಲೆಯಾದ್ಯಂತ ಗುಣಮಟ್ಟದ ಶಾಲೆಗಳ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. ಶಾಲೆಯ ನಿರ್ಮಾಣ ಹಾಗೂ ಉನ್ನತೀಕರಣಕ್ಕೆ ₹5.20 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
‘ನಾನು ಕೂಡ ಈ ಶಾಲೆಯ ಹಳೆಯ ವಿದ್ಯಾರ್ಥಿ. ಇಲ್ಲಿ ಓದಿದವರು ಅನೇಕರು ವೈದ್ಯರು, ಶಿಕ್ಷಕರು, ಐಎಎಸ್ ಅಧಿಕಾರಿಗಳು, ರಾಜಕಾರಣಿಗಳು ಹೀಗೆ ಹಲವು ಕ್ಷೇತ್ರದಲ್ಲಿ ಸಾಧನೆ ತೋರಿದ್ದಾರೆ. ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದೇ ನಮ್ಮ ಗುರಿಯಾಗಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಮೌಲ್ಯಾಧಾರಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡಬೇಕು’ ಎಂದು ತಿಳಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಾಲೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಬಯ್ಯಪ್ಪ ಸದಸ್ಯ ವಿ.ಮಂಜುನಾಥ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಪುರಸಭಾ ಅಧ್ಯಕ್ಷೆ ಭವ್ಯ ಮಹೇಶ್, ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್, ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಆರ್.ಸುನಂದಮ್ಮ, ಸಂತೆ ನಾರಾಯಣಸ್ವಾಮಿ, ಏರ್ ಮಾರ್ಷಲ್ ನಾಗರಾಜ್, ಡಿಡಿಪಿಐ ಬೈಲಾಂಜನಪ್ಪ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ.ಎಂ.ಕಿಶೋರ್ ಕುಮಾರ್, ಕಾರ್ಯದರ್ಶಿ ಎಂ.ಶಿವಕುಮಾರ್, ಸದಸ್ಯರಾದ ಸಂತೆ ನಾರಾಯಣಸ್ವಾಮಿ, ಎಲ್ ಕಾಳಪ್ಪ, ಬಿ.ಎಂ.ಬೈರೇಗೌಡ, ಚಂದ್ರಶೇಖರ ಹಡಪದ, ಶಾಲೆಯ ಮುಖ್ಯಶಿಕ್ಷಕಿ ಕಮಲಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯಪುರ ಸಮಗ್ರ ಅಭಿವೃದ್ಧಿ
‘12 ನೇ ಶತಮಾನದಲ್ಲಿ ಬಸವಣ್ಣನವರು ಕಂಡಂತಹ ಸಮಾನತೆಯ ತತ್ವ ಸಿದ್ಧಾಂತಗಳು ಜಿಲ್ಲೆಯ ಈ ನೆಲದಲ್ಲಿ ಕಾಣಬಹುದು. ನನಗೆ ಚಿಕ್ಕಂದಿನಿಂದಲೂ ವಿಜಯಪುರದಲ್ಲಿ ವಿಶೇಷ ಪ್ರೀತಿ ವಾತ್ಸಲ್ಯ ಸಿಕ್ಕಿದೆ. ರಾಜಕೀಯವಾಗಿ ಈ ಭಾಗದಲ್ಲಿ ನನಗೆ ಅಪಾರ ಬೆಂಬಲ ನೀಡಿ ಹೆಚ್ಚಿನ ಮತಗಳನ್ನು ನೀಡಿದ್ದಾರೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ’ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.