ADVERTISEMENT

ಆನೇಕಲ್: ರೈಲ್ವೆ ಗೇಟ್ ಬಳಿ ಸಾರ್ವಜನಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 2:26 IST
Last Updated 29 ಅಕ್ಟೋಬರ್ 2025, 2:26 IST
ಆನೇಕಲ್ ಸಮೀಪದ ಹಾಲ್ದೇನಹಳ್ಳಿ ರೈಲ್ವೆ ಗೇಟ್ ಬಳಿ ವಾಹನ ದಟ್ಟಣೆ 
ಆನೇಕಲ್ ಸಮೀಪದ ಹಾಲ್ದೇನಹಳ್ಳಿ ರೈಲ್ವೆ ಗೇಟ್ ಬಳಿ ವಾಹನ ದಟ್ಟಣೆ    

ಆನೇಕಲ್: ರೈಲ್ವೇ ಪಥದಿಂದ ಮುಂದೆ ಹೋಗಲು ಪರ್ಯಾಯ ಮಾರ್ಗಗಳಿಲ್ಲದೆ ರೈಲು ಬಂತೆಂದರೆ ಎರಡು ಕಿ.ಮೀ. ವಾಹನಗಳು ನಿಲ್ಲುವಂತಹ ಪರಿಸ್ಥಿತಿ ಆನೇಕಲ್‌ ಪಟ್ಟಣಕ್ಕೆ ಸಮೀಪದ ಹಾಲ್ದೇನಹಳ್ಳಿ ರೈಲ್ವೇ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿದೆ. 

ಆನೇಕಲ್‌ ಪಟ್ಟಣಕ್ಕೆ ಸಮೀಪದ ಹಾಲ್ದೇನಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ತೆರಳುತ್ತಿದ್ದಂತೆ ಅತ್ತಿಬೆಲೆ ರಸ್ತೆ ಮತ್ತು ಆನೇಕಲ್‌ ರಸ್ತೆಗಳಿಂದ ಬರುವವರು ಅಡ್ಡಾದಿಡ್ಡಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮೇಲ್ಸೇತುವೆ ಮತ್ತು ಕೆಳಸೇತುವೆ ಇಲ್ಲದಿರುವುದರಿಂದ ಮತ್ತು ಪರ್ಯಾಯ ರಸ್ತೆಗಳು ಇಲ್ಲದಿರುವುದರಿಂದ ಪ್ರತಿನಿತ್ಯ ರೈಲು ಹೋದ ನಂತರ ಪರದಾಡಬೇಕಾಗಿದೆ. ಹೊಸೂರು, ಅತ್ತಿಬೆಲೆ ಕೈಗಾರಿಕ ಪ್ರದೇಶದಿಂದ ಆನೇಕಲ್‌ನತ್ತ ಬರುವವರು ಅರ್ಧ ತಾಸಿಗೂ ಹೆಚ್ಚು ಸಮಯ ಹಾಲ್ದೇನಹಳ್ಳಿ ರೈಲ್ವೆ ಗೇಟ್‌ ಬಳಿಯಲ್ಲಿಯೇ ನಿಲ್ಲಬೇಕಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ಆಗುತ್ತಿದೆ. 

ADVERTISEMENT

ರೈಲ್ವೆ ಗೇಟ್‌ನಿಂದ ಮತ್ತೊಂದು ಬದಿ ಸಂಪರ್ಕ ಕಲ್ಪಿಸಲು ಅಂಡರ್‌ಪಾಸ್‌ ಇದ್ದರೂ ಮಳೆಯಿಂದಾಗಿ ಕೆಸರು ಗದ್ದೆಯಾಗಿದೆ. ಈ ಅಂಡರ್‌ಪಾಸ್‌ನಲ್ಲಿ ದ್ವಿಚಕ್ರ ವಾಹನ ಸಂಚರಿಸಲು ಸಾಧ್ಯವೇ ಇಲ್ಲ. ಕೆಲವರು ಅಂಡರ್‌ಪಾಸ್‌ನಲ್ಲಿ ಸಾಗಲು ಹೋಗಿ ಕೆಸರಿನಲ್ಲಿ ಸಿಲುಕುವ ದೃಶ್ಯಗಳು ಸಾಮಾನ್ಯವಾಗಿದೆ.

ಹಾಲ್ದೇನಹಳ್ಳಿರೈಲು ನಿಲ್ದಾಣದಲ್ಲಿ ಆರೇಳು ರೈಲುಗಳು ನಿಲ್ಲುತ್ತವೆ. ಉಳಿದವು ಎಕ್ಸ್‌ಪ್ರೆಸ್‌ ರೈಲುಗಳಾಗಿವೆ. ಒಮ್ಮೆ ರೈಲು ಬಂತೆಂದರೆ ಗೇಟ್‌ನಲ್ಲಿ ವಾಹನಗಳ ಉದ್ದನೆಯ ಸಾಲು ಕಂಡು ಬರುತ್ತದೆ. ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಾಹನಗಳ ಸಾಲು ಆನೇಕಲ್‌ ಕಡೆಗೆ ದಿನ್ನೂರುವರೆಗೂ, ಅತ್ತಿಬೆಲೆ ಕಡೆಗೆ ಕರ್ಪೂರಿನವರೆಗೂ ಉದ್ದನೆ ಸಾಲು ಕಂಡು ಬರುತ್ತವೆ. 

ತುರ್ತು ಸಮಯದಲ್ಲಿ ಆಂಬುಲೆನ್ಸ್‌ಗಳು ಸಿಲುಕಿಕೊಂಡರೆ ಪರದಾಡಬೇಕಾಗುತ್ತದೆ. ಅಥವಾ ಕರ್ಪೂರು, ಅರವಂಟಿಕೆಪುರ ಮಾರ್ಗದಲ್ಲಿ ಚಂದಾಪುರ ರಸ್ತೆಗೆ ಹೋಗಬೇಕಾಗುತ್ತದೆ. ಅಂಡರ್‌ಪಾಸ್‌ ಜೊತೆಗೆ ಪರ್ಯಾಯ ರಸ್ತೆ ಮತ್ತು ಕಾರು ಸಂಚರಿಸಲು ಅವಕಾಶವನ್ನು ಅಂಡರ್‌ಪಾಸ್‌ನಲ್ಲಿಯೇ ಕಲ್ಪಿಸಬೇಕು. ಗೇಟ್‌ ತೆರೆಯುತ್ತಿದ್ದಂತೆ ತಾ ಮುಂದು ನಾ ಮುಂದು ಎಂದು ನುಗ್ಗುವಾಗ ಅಪಘಾತಗಳು ಹೆಚ್ಚಾಗುತ್ತವೆ. ಹಾಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆನೇಕಲ್‌ನ ಡಿ.ಮುನಿರಾಜು ತಿಳಿಸಿದರು.

ರೈಲ್ವೇ ದ್ವಿಪಥ ಕಾಮಗಾರಿ ಪ್ರಗತಿಯಲ್ಲಿದ್ದು ಒಂದು ಪಥದಲ್ಲಿದ್ದಾಗಲ್ಲೇ ಸಾರ್ವಜನಿಕರು ಪರದಾಡುವಂತಾಗಿದೆ. ಹಾಗಾಗಿ ದ್ವಿಪಥ ಕಾಮಗಾರಿ ಮುಗಿಯುವಷ್ಟರಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ರೈಲ್ವೆ ಅಂಡರ್‌ ಪಾಸ್‌ ಕೆಸರು ಗದ್ದೆಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.