ADVERTISEMENT

ಮುಚ್ಚಿ ಹೋದ ರಾಜಕಾಲುವೆ: ಮಳೆ ನೀರು ನಿಂತು ಬೆಳೆ ಹಾನಿ ಆತಂಕ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 13:33 IST
Last Updated 5 ಅಕ್ಟೋಬರ್ 2019, 13:33 IST
ವಿಜಯಪುರದ ನಾಗರಬಾವಿಯ ಬಳಿ ರೈತನ ಹೊಲಗಳಲ್ಲಿ ನಿಂತಿರುವ ಮಳೆ ನೀರು
ವಿಜಯಪುರದ ನಾಗರಬಾವಿಯ ಬಳಿ ರೈತನ ಹೊಲಗಳಲ್ಲಿ ನಿಂತಿರುವ ಮಳೆ ನೀರು   

ವಿಜಯಪುರ: ನಿರಂತರವಾಗಿ ಮಳೆಯ ಅಭಾವದಿಂದ ಭೂಮಿಗೆ ಹಾಕಿದ ಬಿತ್ತನೆ ಬೀಜಗಳು ಮೊಳಕೆಯೊಡೆಯುವ ಮುನ್ನವೇ ಒಣಗಿಹೋಗುತ್ತಿರುವುದನ್ನು ಕಂಡು ಮರಗುತ್ತಿದ್ದ ರೈತರ ಪಾಲಿಗೆ, ಇತ್ತಿಚೆಗೆ ಬೀಳುತ್ತಿರುವ ಮಳೆಯ ಮಂದಹಾಸ ಮೂಡಿಸಿದೆ.

ಆದರೆ, ಮಳೆಯ ನೀರು ಹರಿದು ಹೋಗದೆ ಹೊಲಗಳಲ್ಲಿ ನಿಂತಿರುವ ಕಾರಣ ಬೆಳೆ ನಾಶವಾಗುವ ಆತಂಕ ಎದುರಾಗಿದೆ ಎಂದು ರೈತ ರಾಮಕೃಷ್ಣಪ್ಪ ಆತಂಕ ವ್ಯಕ್ತಪಡಿಸಿದರು.

‘ಸತತ ಆರು ವರ್ಷಗಳಿಂದ ಮಳೆಯಿಲ್ಲದೆ, ಬೆಳೆ ಇಲ್ಲದೆ ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದೆವು. ಈ ಬಾರಿ ಉತ್ತಮ ಮಳೆಯಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದೆವು. ಈಗ ಉತ್ತಮವಾಗಿ ಮಳೆಯಾಗುತ್ತಿರುವುದು ಕೊನೆಯಾಗುವ ಜೀವಕ್ಕೆ ಆಸರೆ ನೀಡಿದಂತಾಗಿದೆ. ಆದರೆ, ಮಳೆಯ ನೀರು ಹರಿದುಹೋಗಬೇಕಾಗಿದ್ದ ರಾಜಕಾಲುವೆಗಳು ಒತ್ತುವರಿಯಾಗಿ ಮುಚ್ಚಿಹೋಗಿರುವ ಕಾರಣ ನೀರೆಲ್ಲವೂ ಹೊಲಗಳಲ್ಲಿ ನಿಂತಿವೆ’ ಎಂದು ತಿಳಿಸಿದರು.

ADVERTISEMENT

‘ನಾಲ್ಕೈದು ದಿನ ಹೀಗೆ ನಿಂತರೆ ಕೈಗೆಟುಕುವ ಹಂತಕ್ಕೆ ಬೆಳೆದಿರುವ ಬೆಳೆ ಕೊಳೆತರೆ ಅದೂ ದಕ್ಕುವುದಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ನೀರು ಹರಿದು ಹೋಗಲಿಕ್ಕೆ ಅನುಕೂಲ ಮಾಡಬೇಕು’ ಎಂದು ಒತ್ತಾಯಿಸಿದರು.

ರೈತ ನರಸಿಂಹಪ್ಪ ಮಾತನಾಡಿ, ‘ರೈತರಿಗೆ ಏನೇ ನಷ್ಟವಾದರೂ ಪರವಾಗಿಲ್ಲ ಎನ್ನುವ ರೀತಿಯಲ್ಲಿ ಅಧಿಕಾರಿಗಳ ವರ್ತನೆಯಿದೆ. ಇದುವರೆಗೂ ಮಳೆ ಇರಲಿಲ್ಲ. ಈಗ ಮಳೆ ಬೀಳುವಾಗಲಾದರೂ ರೈತರ ಬೆಳೆಗಳು ಉಳಿಸಲಿಕ್ಕೆ ಅಧಿಕಾರಿಗಳು ಮುಂದಾಗಬಾರದೇ. ಹೊಲಗಳಲ್ಲಿ ನೀರು ನಿಲ್ಲುತ್ತಿದೆ. ಹಳ್ಳಿಗಳಲ್ಲಿ ಚರಂಡಿಗಳಲ್ಲಿ ಹರಿದು ಕೆರೆ, ಕುಂಟೆಗೆ ಹೋಗಬೇಕಾಗಿರುವ ನೀರು ಮನೆಗಳಿಗೆ ನುಗ್ಗುತ್ತಿದೆ’ ಎಂದರು.

‘ಕಾಲುವೆಗಳು ಬಂದ್ ಆಗಿವೆ. ಕೆಲವು ಕಡೆ ರಾಜಕಾಲುವೆಗಳ ಮೇಲೆ ಕಟ್ಟಡಗಳು ನಿರ್ಮಾಣವಾಗಿವೆ. ಅವುಗಳನ್ನು ತೆರವುಗೊಳಿಸುವ ಧೈರ್ಯ ಅಧಿಕಾರಿಗಳಿಗೆ ಇದೆಯೇ. ಯಾರಾದರೂ ಬಡವರು ಒಂದು ಅಡಿ ಸರ್ಕಾರಿ ಭೂಮಿ ಹಾಕಿಕೊಂಡರೆ ನೋಟಿಸ್‌ ಕೊಟ್ಟು ಮಾನಸಿಕವಾಗಿ ಹಿಂಸಿಸುತ್ತಾರೆ. ಪ್ರಭಾವಿಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪರಿಣಾಮದಿಂದ ರೈತರಿಗೆ ಈ ರೀತಿಯಾಗಿ ಬೆಳೆಗಳು ನಷ್ಟವಾದರೂ ಅವರಿಗೇನೂ ಅನ್ನಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಪ್ರತಾಪ್ ಮಾತನಾಡಿ, ‘ಕಂದಾಯ ಇಲಾಖೆಯ ಅಧಿಕಾರಿಗಳು ಹವಾಮಾನ ಇಲಾಖೆಯಿಂದ ಮಳೆಯ ಮಾಹಿತಿ ತರಿಸಿಕೊಂಡು ಹಾನಿಯಾಗದಂತೆ ಮುಂಜಾಗ್ರತೆ ವಹಿಸಬೇಕಾಗಿತ್ತು. ಅವರ ನಿರ್ಲಕ್ಷ್ಯದಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಐದಾರು ವರ್ಷಗಳಿಂದ ಬೆಳೆಗಳು ನಷ್ಟವಾಗಿದ್ದರೂ ಪರಿಹಾರ ಮೊತ್ತ ಬಂದಿಲ್ಲ. ಈಗ ಕೈಗೆ ಬಂದಿರುವ ಬೆಳೆಗಳು ನಷ್ಟವಾದರೂ ಇದರ ಪರಿಹಾರ ಕೊಡುವವರು ಯಾರು ಎನ್ನುವ ಆತಂಕವೂ ಕಾಡುತ್ತಿದೆ. ಈ ವ್ಯವಸ್ಥೆಯ ಬಗ್ಗೆ ಬೇಸರವಾಗಿದೆ. ಕೈಯಲ್ಲಿರುವುದೆಲ್ಲವೂ ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.