ADVERTISEMENT

ರಾಜಘಟ್ಟ: ಶಾಸಕರ ನಡೆ ಹಳ್ಳಿ ಕಡೆಗೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 5:55 IST
Last Updated 6 ಡಿಸೆಂಬರ್ 2022, 5:55 IST
ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ನಡಿಗೆ ಜನಾರ್ಶೀವಾದದ ಕಡೆಗೆ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಯಿಲಿ ಮಾತನಾಡಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ನಡಿಗೆ ಜನಾರ್ಶೀವಾದದ ಕಡೆಗೆ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಯಿಲಿ ಮಾತನಾಡಿದರು   

ದೊಡ್ಡಬಳ್ಳಾಪುರ:ದೇಶದ ಅಭಿವೃದ್ಧಿ, ಬಡವರ ಕಲ್ಯಾಣಕ್ಕೆ ಕಾಂಗ್ರೆಸ್ ಸರ್ಕಾರ ಮಹತ್ವದ ಕೊಡುಗೆ ನೀಡಿದೆ. ಆದರೆ, ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಾಗಲಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ‌ ಸರ್ಕಾರವಾಗಲಿ ಯಾವುದೇಜನಪರ ಯೋಜನೆ ನೀಡಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಯಿಲಿ ಹೇಳಿದರು.

ಸೋಮವಾರ ತಾಲ್ಲೂಕಿನ ರಾಜಘಟ್ಟದ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್‌ ನಡಿಗೆ ಜನಾರ್ಶೀವಾದದ ಕಡೆಗೆ, ಶಾಸಕರ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನರ ಅಭಿವೃದ್ಧಿಗಾಗಿ ಕಾಂಗ್ರೆಸ್ ಮತ್ತೆ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ಮತದಾರರು ಚಿಂತನೆ ನಡೆಸುವ ಮೂಲಕ ಮತ ಚಲಾವಣೆಗೆ ಮುಂದಾಗಬೇಕು. ಯಾವುದೇ ಸುಳ್ಳು ಭರವಸೆಗಳಿಗೆ ಮರುಳಾಗದೆ ಸ್ವಂತವಾಗಿ ಯೋಚಿಸಬೇಕಿದೆ. ಕಾಂಗ್ರೆಸ್‌ ಚುನಾವಣ ಪೂರ್ವದ ತನ್ನ ಪ್ರಣಾಳಿಕೆಯಲ್ಲಿ ಮತದಾರರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತ ಬರುತ್ತಿದೆ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಎಸ್. ರವಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಮಗಾರಿಗಳಿಗೆ 40ರಷ್ಟು ಕಮಿಷನ್, ಪಿಎಸ್‌ಐ ನೇಮಕದಲ್ಲಿ ಅಕ್ರಮ, ಮತದಾರರ ಪಟ್ಟಿಯಲ್ಲಿ ಮಾಹಿತಿ ಕಳವು ಸೇರಿದಂತೆ ರಾಜ್ಯದ ಘನತೆಯನ್ನು ಹಾಳು ಮಾಡುತ್ತಿದೆ ಎಂದು ದೂರಿದರು.

‌ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ರಾಜ್ಯದ ಬಡಜನತೆ ನೆಮ್ಮದಿಯಿಂದ ಊಟ ಮಾಡಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ಈ ಹಿಂದೆ ಮಾಡಿದ್ದ ಅಭಿವೃದ್ಧಿ ಕಾರ್ಯಗಳ ಜೊತೆಗೆ, ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವುದು, ಜಿಲ್ಲಾ ಆಸ್ಪತ್ರೆ ಸ್ಥಾಪನೆ‌ ಮುಂತಾದ ಅನೇಕ ಯೋಜನೆಗಳು ಅನುಷ್ಠಾನವಾಗಲು ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕಿದೆ
ಎಂದರು.

ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ. ಜಗನ್ನಾಥ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ. ಬೈರೇಗೌಡ, ಕಸಬಾ ಬ್ಲಾಕ್‌ ಅಧ್ಯಕ್ಷ ವೆಂಕಟೇಶ್‌, ಕೆಪಿಸಿಸಿ ಸದಸ್ಯ ಎಸ್‌.ಆರ್‌. ಮುನಿರಾಜು, ನಗರಸಭೆ ಸದಸ್ಯೆ ನಾಗವೇಣಿ, ಆನಂದ್‌, ಟಿಎಪಿಸಿಎಂಎಸ್‌ ನಿರ್ದೇಶಕ ಡಿ. ಸಿದ್ದರಾಮಯ್ಯ, ಎಂ. ಗೋವಿಂದರಾಜ್‌, ಮುಖಂಡರಾದ ಸಿ.ಡಿ. ಸತ್ಯನಾರಾಯಣಗೌಡ, ಜಿ. ಚುಂಚೇಗೌಡ, ಎಸ್‌.ಜಿ. ಸೋಮರುದ್ರ ಶರ್ಮ, ನಾರಾಯಣಗೌಡ, ಆದಿತ್ಯ ನಾಗೇಶ್, ಅಖಿಲೇಶ್, ಜವಾಜಿ ರಾಜೇಶ್, ವಿಶ್ವನಾಥ ರೆಡ್ಡಿ, ನಾಗರಾಜ್, ರೇವತಿ ಅನಂತರಾಮ್‌, ಪ್ರಭಾ, ಮಮತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.