
ಹೊಸಕೋಟೆ: ಈ ಹಿಂದೆ ಒಂದು ಸಿದ್ಧಾಂತಕ್ಕಾಗಿ ಬದುಕುತ್ತಿದ್ದರು. ಕೆಲವೊಮ್ಮೆ ಮಾನವತ್ವದ ಪ್ರಶ್ನೆ ಬಂದಾಗ ಸಿದ್ಧಾಂತ ದಾಟಿಯೂ ಬರುತ್ತಿದ್ದರು. ಇಂದು ಸಿದ್ಧಾಂತದ ಹೆಸರಲ್ಲಿ ಮಾನವೀಯತೆ ಹೊಸಕಿಹಾಕುತ್ತಿದ್ದೇವೆ. ಅದೇ ದುರಂತ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕರ ಸಂಘ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಹಳ್ಳಿ ಅವರಿಗೆ ಆಯೋಜಿಸಿದ್ದ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದರು.
ರಾಧಾಕೃಷ್ಣ, ಅಬ್ದುಲ್ ಕಲಾಂ ಅವರ ಶ್ರೇಷ್ಠಯುತ ಬದುಕು ಯಾವ ಜಾತಿ, ಮಾತಕ್ಕೂ ಸೀಮಿತವಲ್ಲ ಅದು ಮಾನವತ್ವದ ಸಂಕೇತ. ಅಂತಹ ಬದುಕನ್ನು ನಾವೆಲ್ಲರೂ ನಡೆಸಬೇಕಿದೆ. ಜೊತೆಗೆ ಪ್ರತಿ ಪುರುಷನ ಸಾಧನೆ ಹಿಂದೆ ಹೆಣ್ಣು ಇದ್ದಾಳೆ ಎಂಬುದನ್ನು ಬಾಯಿ ಮಾತಲ್ಲಿ ಹೇಳುವುದಲ್ಲ. ಆಕೆಗೂ ಒಂದು ಬದುಕಿದೆ ಎಂಬುದನ್ನು ಪುರುಷ ಶಾಹಿವರ್ಗ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ರೋಗಗ್ರಸ್ಥ ಮನಸ್ಥಿತಿ: ಇಂದಿಗೂ ಅಂಬೇಡ್ಕರ್ ಮತ್ತು ಗಾಂಧಿ ಸೇರಿದಂತೆ ಮಹಾನ್ ಮಾನವತಾವಾದಿಗಳನ್ನು ಒಪ್ಪಿಕೊಳ್ಳದವರು ರೋಗಗ್ರಸ್ತ ಮನಸ್ಥಿತಿವುಳ್ಳವರು ಇದ್ದಾರೆ. ಇಂಥವರು ಅವರ ವ್ಯಕ್ತಿತ್ವವನ್ನು ಅರಿಯದೆ ಮಾತನಾಡುತ್ತಾರೆ. ಹಾಗಾಗಿಯೇ ಇಂದು ಅಂಬೇಡ್ಕರ್ ಅವರನ್ನು ದಲಿತರು, ಮೀಸಲಾತಿಗೆ ಸಂಬಂಧಿಸಿದವರು ಎನ್ನುವಂತಹ ಸ್ಥಿತಿ ನಿರ್ಮಾವಾಗಿದೆ ಎಂದು ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಹೇಳಿದರು.
ಕತೆಗರಾರು, ಅನುವಾದಕ ಗಂಗಾಧರಯ್ಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮಿಲನ ಇಲ್ಲದಿದ್ದರೆ ವಿದ್ಯಾಲಯಗಳಲ್ಲಿ ಶೂನ್ಯ ವಾತಾವರಣ ಇರುತ್ತದೆ. ವಿದ್ಯಾರ್ಥಿಗಳಲ್ಲಿಯೂ ಮನುಷ್ಯತ್ವ ರೂಪಿಸುವ ಬಹುದೊಡ್ಡ ಶಕ್ತಿ ಶಿಕ್ಷಕರಲ್ಲಿ ಮಾತ್ರ ಇದೆ. ಮನುಷ್ಯತ್ವ ಹೇಳಿಕೊಡುವ ಶಿಕ್ಷಕರು ಆಡಳಿತ ವಿಭಾಗದಲ್ಲಿಯೂ ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ ಸಮಾಜ ಎಂಬ ದೋಣಿಯ ನಾವಿಕ ಇಲ್ಲದಂತಾಗುತ್ತದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಡಾ.ಈರಣ್ಣ ಅವರು ಸಂಪಾದಿಸಿರುವ ಪ್ರೊ. ನಿರಂಜನ ವಾನಳ್ಳಿ ಅವರ ಅಭಿನಂದನಾ ಸಂಪುಟ ‘ಸುವರ್ಣಗಂಗೆ’ ಯನ್ನು ಬಿಡುಗಡೆ ಮಾಡಲಾಯಿತು.
ಮೌಲ್ಯಮಾಪನ ಕುಲಸಚಿವ ಡಾ.ಎನ್. ಲೋಕನಾಥ್, ಆಡಳಿತ ಕುಲಸಚಿವ ಸಿ.ಎನ್. ಶ್ರೀಧರ್, ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಡಾ ಮುರಳಿಧರ್, ವಿಸ್ತರಣಾಧಿಕಾರಿ ದ ವಸಂತ್ ಕುಮಾರ್, ಪ್ರಾಂಶುಪಾಲ ಪ್ರೊ.ರಾಮಲಿಂಗಪ್ಪ ಟಿ. ಬೇಗೂರು, ನಿವೃತ್ತ ಪ್ರಾಂಶುಪಾಲ ಮುನಿನಾರಾಯಣಪ್ಪ, ಡಾ.ವಿಶ್ವೇಶ್ವರಯ್ಯ, ಸಿಂಡಿಕೆಟ್ ಸದಸ್ಯರಾದ ಮುತ್ತೇಗೌಡ, ನಾಗಾರ್ಜುನ, ಕೃಪಾನಿಧಿ, ಅಮರ ಜ್ಯೋತಿ ಉಪಸ್ಥಿತರಿದ್ದರು.
ಸರ್ಕಾರಿ ಕೆಲಸ ಅಪಘಾತ ಎದುರಿಸಿದ್ದಂತೆ ಅಪಘಾತವಾದರೂ ಸಣ್ಣಗಾಯವೂ ಆಗದಂತೆ ಹೊರಬರುವವರೇ ನಿಜವಾದ ಪುಣ್ಯವಂತರು. ಸರ್ಕಾರಿ ಹುದ್ದೆಯಿಂದ ನಿವೃತ್ತಿ ಹೊಂದುವುದು ಎಂದರೆ ಹುಚ್ಚಾಸ್ಪತ್ರೆಯಿಂದ ಹೊರಬಂದಂತೆ.ಕೆ.ಆರ್. ರಮೇಶ್ ಕುಮಾರ ಮಾಜಿ ಸ್ಪೀಕರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.