ಆನೇಕಲ್: ‘ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ ನಿರ್ಮಿಸಲಾಗಿದ್ದ ಅಂಬೇಡ್ಕರ್ ಪುತ್ಥಳಿ ತೆರವು ಖಂಡಿಸಿ ಮೇ 22ರಂದು ಚಿಂತಾಮಣಿ ಬಂದ್‌ಗೆ ದಲಿತಪರ ಸಂಘಟನೆಗಳು ಕರೆ ನೀಡಿದೆ. ತಾಲ್ಲೂಕಿನ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘದಿಂದ ಸಾವಿರಾರು ಪದಾಧಿಕಾರಿಗಳು ಚಿಂತಾಮಣಿ ಬಂದ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮರಸೂರು ಕೃಷ್ಣಪ್ಪ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಚಿಂತಾಮಣಿ ನಗರದ ಬಾಲಕರ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಅಂಬೇಡ್ಕರ್ ಪುತ್ಥಳಿಯನ್ನು ತಾಲ್ಲೂಕು ಆಡಳಿತ ರಾತ್ರೋರಾತ್ರಿ ತೆರವುಗೊಳಿಸಿದೆ. ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲಾಗಿದೆ ಎನ್ನಲಾಗಿದೆ. ಆದರೆ ಏಕಾಏಕಿ ಅಂಬೇಡ್ಕರ್ ಪುತ್ಥಳಿ ತೆರವುಗೊಳಿಸಿರುವುದು ಖಂಡನೀಯ. ಮೇ 22ರಂದು ಚಿಂತಾಮಣಿಯಲ್ಲಿ 20ಕ್ಕೂ ಹೆಚ್ಚು ದಲಿತ ಮತ್ತು ಪ್ರಗತಿಪರ ಸಂಘಟನೆಗಳು, ಚಿಂತಾಮಣಿ ಬಂದ್‌ಗೆ ಕರೆ ನೀಡಿದೆ’ ಎಂದರು.
‘ಅಂಬೇಡ್ಕರ್ ಪುತ್ಥಳಿಯ ತೆರವು ಅವರ ಸಾಧನೆಗೆ ಮಾಡಿದ ಅವಮಾನ. ತೆರವು ಹಿಂದೆ ಕೆಲವು ಮನುವಾದಿಗಳಿದ್ದಾರೆ’ ಎಂದರು.
ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷ ಬೊಮ್ಮಸಂದ್ರ ರೇಣುಕಾ ಮಾತನಾಡಿ, ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಸಂಬಂಧ ಶಿಕ್ಷಣ ಇಲಾಖೆಯಿಂದ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದಿದ್ದರೂ ಕೆಲವು ಕಿಡಿಗೇಡಿಗಳ ಕುತಂತ್ರದಿಂದಾಗಿ ಪುತ್ಥಳಿಯನ್ನು ತಿರುಗು ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಲಾಗುವುದು. ಚಿಂತಾಮಣಿ ಬಂದ್ ಮೂಲಕ ಅಂಬೇಡ್ಕರ್ ಶಕ್ತಿಯನ್ನು ಅವರ ವಿರೋಧಿಗಳಿಗೆ ಪ್ರದರ್ಶಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.