ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲುಕುಡಿ ಬೆಟ್ಟದ ತಪ್ಪಲಿನ ಹಳೇಕೋಟೆ ಗ್ರಾಮದ ರೈತ ಮುನಿಕುಮಾರ್ ಅವರ ಜೋಳದ ಹೊಲದಲ್ಲಿ ಮಂಗಳವಾರ ಬೃಹತ್ ಗಾತ್ರದ ಹೆಬ್ಬಾವು ಕಂಡು ಬಂದಿದ್ದು ರಕ್ಷಣೆ ಮಾಡಲಾಗಿದೆ.
ಹೊಲದ ಬದುವಿನಲ್ಲಿ ಅರಸು ರಾಜು ಎಂಬುವವರು ಹುಲ್ಲು ಕೊಯ್ಲು ಮಾಡುವ ಸಮಯದಲ್ಲಿ ಹೆಬ್ಬಾವು ಕಂಡು ಬಂದಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಉರಗ ತಜ್ಞ ಪ್ರಶಾಂತ್ ಅವರನ್ನು ಸ್ಥಳಕ್ಕೆ ಕರೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿಯುವ ಮೂಲಕ ದೂರದ ಅರಣ್ಯ ಪ್ರದೆಶಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಕುರುಚಲು ಅರಣ್ಯದಲ್ಲಿನ ಕಲ್ಲುಗಳ ನಡುವೆ ಹೆಬ್ಬಾವು ಹೆಚ್ಚಾಗಿ ವಾಸ ಮಾಡುತ್ತವೆ. ಈ ಸ್ಥಳದಲ್ಲಿ ಈಗ ಕಲ್ಲುಗಣಿಗಾರಿಕೆ ನಡೆಯುತ್ತಿರುವುದರಿಂದ ಹೆಬ್ಬಾವು ಸುರಕ್ಷಿತ ಸ್ಥಳ ಹುಡುಕುತ್ತ ಹೊಲಗಳ ಕಡೆಗೆ ಬಂದಿರಬಹದು. ಇಲ್ಲಿವರೆಗೂ ಈ ಭಾಗದಲ್ಲಿ ಇಷ್ಟೊಂದು ಬೃಹತ್ ಗಾತ್ರದ ಹಾವು ನೋಡಿರಲಿಲ್ಲ ಎನ್ನುತ್ತಾರೆ ತಾಲ್ಲೂಕು ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣೇಗೌಡ.
ಇನ್ನೂ ಇರಬಹುದು: ಹುಲುಕುಡಿ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ, ಎತ್ತಿನಹೊಳೆ ಪೈಪ್ ಲೈನ್ ಅಳವಡಿಕೆಗಾಗಿ ಬೆಟ್ಟದ ತಪ್ಪಲಿನಲ್ಲಿ ಬೃಹತ್ ಗಾತ್ರದ ಕಾಲುವೆಗಳನ್ನು ತೋಡುತ್ತಿರುವುದರಿಂದ ಹೆಬ್ಬಾವಿನ ಸಹಜ ಸಂಚಾರಕ್ಕೆ ಅಡ್ಡಿಯಾಗಿದೆ.
ಹಾಗಾಗಿಯೇ ದಾರಿತಪ್ಪಿ ಸುರಕ್ಷಿತ ಸ್ಥಳ ಹುಡುಕುತ್ತಾ ರೈತರ ಹೊಲಗಳ ಕಡೆಗೆ ಬಂದಿದೆ ಎನ್ನುವ ಉರಗ ತಜ್ಞ ಪ್ರಶಾಂತ್, ಈಗ ರಕ್ಷಣೆ ಮಾಡಲಾಗಿರುವ ಹೆಣ್ಣು ಹೆಬ್ಬಾವು 7 ಅಡಿಯಷ್ಟು ಉದ್ದ ಹಾಗೂ 20 ಕೆ.ಜಿ ತೂಕ ಇದೆ. ಮೊಲ ಅಥವಾ ಕುರಿ, ಮೇಕೆ ಮತ್ಯಾವುದಾದರು ಸಣ್ಣ ಪ್ರಾಣಿಯನ್ನು ನುಗ್ಗಿರಬಹುದು. ಸುಮಾರು 8 ರಿಂದ 10 ವರ್ಷ ಪ್ರಾಯದ ಈ ಹೆಣ್ಣು ಹೆಬ್ಬಾವು ಆರೋಗ್ಯವಾಗಿದೆ.
ಇದರೊಂದಿಗೆ ಗಂಡು ಸಹ ಇರುತ್ತದೆ. ಹಾಗೆಯೇ ಇವುಗಳ ಸಂತತಿಯು ಸಹಜವಾಗಿಯೇ ಇರುತ್ತದೆ. 8 ತಿಂಗಳ ಹಿಂದೆ ದೊಡ್ಡಬೆಳವಂಗಲ, ದಾಬಸ್‌ಪೇಟೆ ನಡುವಿನ ಮುದ್ದಲಿಂಗನಹಳ್ಳಿ ರೈಲ್ವೆ ನಿಲ್ದಾಣ ಸಮೀಪ ಹೆಬ್ಬಾವು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿತ್ತು. ಈಗ ಹಿಡಿಯಲಾಗಿರುವ ಹೆಬ್ಬಾವು ಈ ಭಾಗದಲ್ಲಿ ಇದುವರೆಗೂ ಕಂಡಿರುವ ಹೆಬ್ಬಾವುಗಳ ಪೈಕಿ ಬೃಹತ್ ಗ್ರಾಮದಿಂದ ಕೂಡಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.