ADVERTISEMENT

ಸಾವು, ಬದುಕಿನ ನಡುವೆ ಹೋರಾಡಿದ ಹುಲಿ ಮರಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 6:10 IST
Last Updated 21 ಅಕ್ಟೋಬರ್ 2022, 6:10 IST
ಬನ್ನೇರುಘಟ್ಟ ಜೈವಿಕ ಉದ್ಯಾನದ ಹುಲಿ ಮರಿ
ಬನ್ನೇರುಘಟ್ಟ ಜೈವಿಕ ಉದ್ಯಾನದ ಹುಲಿ ಮರಿ   

ಆನೇಕಲ್: ಆಹಾರ ಸೇವಿಸದೆ ನಿತ್ರಾಣಗೊಂಡು ಸಾವು, ಬದುಕಿನ ನಡುವೆ ಹೋರಾಟ ನಡೆಸಿದ್ದಬನ್ನೇರುಘಟ್ಟ ಜೈವಿಕ ಉದ್ಯಾನದ ಏಳು ತಿಂಗಳ ಹುಲಿ ಮರಿಯೊಂದು ಬದುಕುಳಿದಿದೆ.

ಉದ್ಯಾನದ ಹುಲಿಗಳಾದ ಅನಿಷ್ಕಾ ಮತ್ತು ಮಿಥುನ್‌ ಜೋಡಿಗೆ ಮಾರ್ಚ್‌ 22ರಂದು ಈ ಹೆಣ್ಣು ಮರಿ ಜನಿಸಿತ್ತು. ಹುಟ್ಟಿದಾಗಿನಿಂದಲೂ ಇದು ತಾಯಿ ಜೊತೆ ಸೇರಿರಲಿಲ್ಲ. ತಾಯಿಯ ಹಾಲಿಲ್ಲದೇ ನಿತ್ರಾಣಗೊಂಡಿತ್ತು. ಉದ್ಯಾನದ ಸಿಬ್ಬಂದಿ ಹುಲಿ ಮರಿಯನ್ನು ಉಳಿಸುವ ನಿಟ್ಟಿನಲ್ಲಿ ಉದ್ಯಾನದ ಆಸ್ಪತ್ರೆಗೆ ಸ್ಥಳಾಂತರಿಸಿ ಮೇಕೆ ಹಾಲು, ಗ್ಲೂಕೋಸ್‌ ನೀಡಿದ್ದರು.

ಆದರೆ, ಹುಲಿ ಮರಿಯ ಹೊಟ್ಟೆ ಕೆಳಭಾಗದಲ್ಲಿ ಪದೇ ಪದೇ ನೀರು ತುಂಬಿಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿ ಅದು ಆಹಾರ ಸೇವಿಸಲು ಪರದಾಡುತ್ತಿತ್ತು. ತಪಾಸಣೆ ಮತ್ತು ಎಕ್ಸ್‌ರೇ ನಡೆಸಿದಾಗ ಅದರ ಮೂತ್ರಕೋಶದಲ್ಲಿ ಸಣ್ಣ ಸಣ್ಣ ಗುಳ್ಳೆ ಮತ್ತು ಗಡ್ಡೆಗಳು (ಪಾಲಿಸಿಸ್ಟಿಕ್‌ ಕಿಡ್ನಿ ಡಿಸೀಸ್–ಪಿಕೆಡಿ) ಇರುವುದು ಕಂಡುಬಂದಿತು. ಹುಟ್ಟಿದಾಗಿನಿಂದಲೂ ಈ ಸಮಸ್ಯೆ ಇತ್ತು. ಅದರಿಂದಾಗಿ ಮರಿಯನ್ನು ಬದುಕುಳಿಸುವುದು ಸವಾಲಿನ ಕೆಲಸವಾಗಿತ್ತು ಎಂದು ವೈದ್ಯಕೀಯ ಮಾಹಿತಿಗಳಿಂದ ತಿಳಿದುಬಂದಿತು.

ADVERTISEMENT

ಆದರೆ, ಉದ್ಯಾನದ ಕಾರ್ಯ ನಿರ್ವಾಹಕ ನಿರ್ದೇಶಕ ಸುನೀಲ್‌ ಪನ್ವಾರ್‌ ನಿರ್ದೇಶನದಂತೆ ವೈದ್ಯರು ಚಿಕಿತ್ಸೆ ಮುಂದುವರಿಸಿದರು. ಕೆಲವೇ ದಿನಗಳಲ್ಲಿ ಅದರ ಕಣ್ಣುಗಳಲ್ಲಿ ಪೊರೆಯೂ ಕಂಡುಬಂದಿತು. ಇದು ಸಹಪಾಲಿಸಿಸ್ಟಿಕ್‌ ಕಿಡ್ನಿ ಡಿಸೀಸ್–ಪಿಕೆಡಿ ಕಾಯಿಲೆಯ ಲಕ್ಷಣ ಎಂಬುದು ವೈದ್ಯರಿಗೆ ತಿಳಿಯಿತು.

ಉದ್ಯಾನದ ವೈದ್ಯರಾದ ಡಾ.ಉಮಾಶಂಕರ್‌, ಡಾ.ಮಂಜುನಾಥ್‌, ಡಾ.ವಿಜಯಕುಮಾರ್, ಡಾ.ವಿಶಾಖ ಅವರು ಮರಿಯನ್ನು ಮಗುವಿನಂತೆ ಪೋಷಣೆ ಮಾಡಿದರು. ಸಿಬ್ಬಂದಿಯಾದ ಸಾವಿತ್ರಮ್ಮ, ಮಹದೇವ, ಶಿವಕುಮಾರ್, ರಾಜು, ಗಿರಿಮಲ್ಲ ಎರಡು ಪಾಳಿಗಳಲ್ಲಿ ಹುಲಿ ಮರಿಯನ್ನು ಆರೈಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.