ADVERTISEMENT

‘ಕನ್ನಡದ ಉಳಿವು ಎಲ್ಲರ ಜವಾಬ್ದಾರಿ’

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 5:16 IST
Last Updated 26 ನವೆಂಬರ್ 2020, 5:16 IST
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಉಪಸ್ಥಿತರಿದ್ದರು
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಉಪಸ್ಥಿತರಿದ್ದರು   

ದೇವನಹಳ್ಳಿ: ಕನ್ನಡ ಭಾಷೆಯ ಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಹಳೆ ಬಸ್‌ನಿಲ್ದಾಣದಲ್ಲಿ ಜೈಭುವನೇಶ್ವರಿ ಆಟೊ ಮತ್ತು ಕಾರುಗಳ ಮಾಲೀಕರ ಹಾಗೂ ಚಾಲಕರ ಸಂಘದಿಂದ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಚಾಲಕರು ತಮ್ಮ ವಾಹನಗಳ ಮೇಲೆ ನಟರು, ಸಾಹಿತಿಗಳು, ಚಿಂತಕರು ಮತ್ತು ಕನ್ನಡಾಂಭೆಯ ಭಾವಚಿತ್ರ ಮತ್ತು ಅಕ್ಷರಗಳನ್ನು ಬರೆಯಿಸಿ ಕನ್ನಡ ಭಾಷೆಯ ಸಾರ್ಥಕತೆಯನ್ನು ಪ್ರತಿನಿತ್ಯ ಪ್ರಚಾರ ಮಾಡುತ್ತಿದ್ದಾರೆ. ಇಂತಹ ಚಾಲಕರೇ ನಿಜವಾದ ಭಾಷಾಭಿಮಾನಿಗಳು ಎಂದು ಹೇಳಿದರು.

ADVERTISEMENT

ರಾಜ್ಯ ಸರ್ಕಾರ ಪ್ರಸಕ್ತ ವರ್ಷವನ್ನು ಕಾಯಕ ವರ್ಷವೆಂದು ಘೋಷಣೆ ಮಾಡಿದೆ. ಯಾವುದಕ್ಕೆ ಕಾಯಕ ವರ್ಷ, ಅದರ ಉದ್ದೇಶವೇನು ಎಂಬುದರ ಬಗ್ಗೆ ತಿಳಿಸಿಲ್ಲ. ಕ್ರಿಯಾಯೋಜನೆ ರೂಪಿಸಿ ಇಂತಿಷ್ಟು ಅನುದಾನ ನೀಡಿಲ್ಲ. ಸರ್ಕಾರದ ಘೋಷಣೆಗಳಿಗೆ ಕೊರತೆ ಇಲ್ಲ. ಅವುಗಳನ್ನು ಎಷ್ಟರಮಟ್ಟಿಗೆ ಕಾರ್ಯಗತ ಗೊಳಿಸಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ ಘೋಷಣೆಗೆ ಅರ್ಥವಿದೆಯೇ ಎಂದು ಪ್ರಶ್ನಿಸಿದರು.

ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಅಕ್ಷರ ಭವನ ನಿರ್ಮಾಣ ಮಾಡಬೇಕು. ಕನ್ನಡ ಭಾಷೆಯ ಬೆಳವಣಿಗೆ, ಅದರ ಸಾಧಕ, ಬಾಧಕಗಳ ಬಗ್ಗೆ ಚರ್ಚಿ ನಡೆಸುವಂತಾಗಬೇಕು. ಅನ್ಯಭಾಷಿಕರನ್ನು ವಿಶ್ವಾಸದಿಂದ ಕಾಣಬೇಕು. ಕನ್ನಡ ಭಾಷಾ ಕಲಿಕಾ ಶಿಬಿರ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ಸಿ. ಜಗನ್ನಾಥ್, ಪುರಸಭೆ ಸದಸ್ಯ ರವೀಂದ್ರ, ಚಾಲಕರ ಸಂಘದ ಗೌರವಾಧ‍್ಯಕ್ಷ ದೇವರಾಜ್, ಅಧ್ಯಕ್ಷ ಕೃಷ್ಣಮೂರ್ತಿ, ಸಹಾಯಕ ಸಾರಿಗೆ ಇಲಾಖೆಯ ಅಧಿಕಾರಿ ಉಮೇಶ್, ವಾಲ್ಮೀಕಿ ನಾಯಕ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ್, ಮುಖಂಡರಾದ ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.