ADVERTISEMENT

ಆಸ್ತಿಖಾತೆ ವಿತರಣೆಯಲ್ಲಿ ಸುಧಾರಣೆ -ಸಚಿವ ಆರ್.ಅಶೋಕ

ಪೌತಿಖಾತೆ ಆಂದೋಲನದಲ್ಲಿ ಖಾತೆ ಪತ್ರ ವಿತರಿಸಿದ ಸಚಿವ ಆರ್.ಅಶೋಕ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 4:01 IST
Last Updated 23 ಜನವರಿ 2023, 4:01 IST
ಜಡಿಗೇನಹಳ್ಳಿಯ ಪರಿಶಿಷ್ಟರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಕುರಿ ಮರಿಗಳನ್ನು ಮುದಾಡಿದ ಸಚಿವರು.
ಜಡಿಗೇನಹಳ್ಳಿಯ ಪರಿಶಿಷ್ಟರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಕುರಿ ಮರಿಗಳನ್ನು ಮುದಾಡಿದ ಸಚಿವರು.   

ಹೊಸಕೋಟೆ: ಪೌತಿಖಾತೆ ಆಂದೋಲನದ ಮೂಲಕ ಆಸ್ತಿಯ ಖಾತೆ ಹಕ್ಕುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಆಡಳಿತಾತ್ಮಕ ಮಹತ್ವದ ಸುಧಾರಣೆ ಬಂದಿದೆ. ಪೌತಿ ಖಾತೆ ಹೊಂದಿದ ಖಾತೆದಾರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ದೊರೆಯುವ ಆರ್ಥಿಕ ಸೌಕರ್ಯಗಳನ್ನು ಕೂಡ ತ್ವರಿತವಾಗಿ ತಲುಪಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು‌.

ತಾಲ್ಲೂಕಿನ ಜಡಿಗೇನಹಳ್ಳಿಯಲ್ಲಿ ಭಾನುವಾರ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪೌತಿಖಾತೆ ಆಂದೋಲನದಲ್ಲಿ ಖಾತೆ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ರೈತ ಕುಟುಂಬಗಳು ತಮ್ಮ ಆಸ್ತಿಗಳನ್ನು ಭಾಗ ಮಾಡಿಕೊಳ್ಳುವುದು ಈ ಹಿಂದೆ ಬಹಳ ಸವಾಲಿನ ಕಾರ್ಯವೆನಿಸಿತ್ತು. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ, ಪೌತಿ ಖಾತೆ ಆಂದೋಲನದ ಪರಿಣಾಮವಾಗಿ ಜನರ ಮನೆ ಬಾಗಿಲಿಗೆ ದಾಖಲೆ ಬರುವಂತಾಗಿದೆ ಎಂದರು.

ADVERTISEMENT

ಆಸ್ತಿಯಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕುಗಳಿವೆ. ಅನಗತ್ಯ ತಂಟೆ, ತಕರಾರುಗಳಿಗೆ ಅವಕಾಶವಾಗದಂತೆ ನ್ಯಾಯಯುತ ಮಾರ್ಗದಲ್ಲಿ ಆಸ್ತಿ ವಿಭಜನೆ ಮಾಡಿಕೊಂಡು ಪ್ರತಿಯೊಬ್ಬರು ತಮ್ಮ ಪಾಲಿನ ಖಾತೆಗಳನ್ನು ಹೊಂದಿದರೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸಾಲ ಸೌಲಭ್ಯಗಳನ್ನು ಪಡೆಯಲು ಸುಲಭವಾಗುತ್ತದೆ ಎಂದರು.

ಪೌತಿಖಾತೆಗೆ ಅರ್ಜಿ ಸಲ್ಲಿಸಿದ್ದ 17 ಕುಟುಂಬಗಳಿಗೆ ಸಚಿವರು ಆಸ್ತಿಖಾತೆ ದಾಖಲೆಗಳನ್ನು ವಿತರಿಸಿದರು.ಪೌತಿಖಾತೆಗೆ ಅರ್ಜಿ ಸಲ್ಲಿಸಿ ನೋಟಿಸ್ ಅವಧಿಯಲ್ಲಿರುವ 98 ಜನರಿಗೂ ವಿಳಂಬ ಮಾಡದೆ ಖಾತೆ ಪತ್ರಗಳನ್ನು ವಿತರಿಸಿದರು.
ನಂತರ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

ಎಪಿಎಂಸಿಯು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು ಜಮೀನಿನಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ನಿರ್ಮಿಸಿರುವ ನೂತನ ಕಾಂಕ್ರೀಟ್ ಮುಚ್ಚು ಹರಾಜು ಕಟ್ಟೆಯನ್ನು ಸಚಿವರು ಉದ್ಘಾಟಿಸಿದರು.

ಸಚಿವರಾದ ಎಂ.ಟಿ.ಬಿ.ನಾಗರಾಜ್‌, ಜಿಲ್ಲಾಧಿಕಾರಿ ಆರ್.ಲತಾ,
ಉಪವಿಭಾಗಾಧಿಕಾರಿ ತೇಜಸ್ ಕುಮಾರ್,ತಹಸೀಲ್ದಾರ್ ಮಹೇಶಕುಮಾರ್ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.