ADVERTISEMENT

ಎರಡು ವರ್ಷವಾದರೂ ಪೂರ್ಣವಾಗದ ರಸ್ತೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 18:38 IST
Last Updated 29 ಡಿಸೆಂಬರ್ 2025, 18:38 IST
ನರಸೀಪುರ ತೋಪಿನ ಮಧುಗಿರಿ ಮುಖ್ಯರಸ್ತೆಯಿಂದ ಎಲೆಕ್ಯಾತನಹಳ್ಳಿ ಮುಖ್ಯರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಜಲ್ಲಿ ಹರಡಿರುವುದು
ನರಸೀಪುರ ತೋಪಿನ ಮಧುಗಿರಿ ಮುಖ್ಯರಸ್ತೆಯಿಂದ ಎಲೆಕ್ಯಾತನಹಳ್ಳಿ ಮುಖ್ಯರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಜಲ್ಲಿ ಹರಡಿರುವುದು   

ದಾಬಸ್‌ ಪೇಟೆ: ವಾಹನಗಳು ಓಡಾಡಿದರೆ ಏಳುವ ದೂಳು, ರಸ್ತೆಯ ತುಂಬೆಲ್ಲಾ ಹರಡಿರುವ ಜಲ್ಲಿಕಲ್ಲುಗಳು, ಅಲ್ಲಲ್ಲಿ ಬಿದ್ದಿರುವ ಗುಂಡಿಗಳು, ಸ್ವಲ್ಪ ಆಯ ತಪ್ಪಿದರೂ ದ್ವಿಚಕ್ರ ವಾಹನಗಳಿಂದ ನೆಲಕ್ಕೆ ಬೀಳುವ ಸವಾರರು. ರಸ್ತೆಯ ಬದಿಯ ತೋಟ, ಮನೆಗಳಿಗೆ ತುಂಬಿಕೊಳ್ಳುತ್ತಿರುವ ದೂಳು.

ಇದು ಸೋಂಪುರ ಹೋಬಳಿಯ ನರಸೀಪುರ ತೋಪಿನ ಮಧುಗಿರಿ ಮುಖ್ಯರಸ್ತೆಯಿಂದ ಬುಗಡಿಹಳ್ಳಿ ಕೆರೆಪಾಳ್ಯ ಬೆಂಡಗೆರೆ ಮಾರ್ಗವಾಗಿ ಎಲೆಕ್ಯಾತನಹಳ್ಳಿ ಮುಖ್ಯರಸ್ತೆ ಸಂಪರ್ಕ ಕಲ್ಪಿಸುವ ರಸ್ತೆ ಸ್ಥಿತಿ.

ಶಾಸಕ ಎನ್.ಶ್ರೀನಿವಾಸ ಅವರು 2023ರ ಡಿಸೆಂಬರ್ 2ರಂದು ಈ ರಸ್ತೆ ಕಾಮಗಾರಿಯ ಪೂಜೆಯನ್ನು ನೆರವೇರಿಸಿದ್ದರು. ಎರಡು ವರ್ಷ ಮುಗಿದರೂ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ, ಸಾರ್ವಜನಿಕರಿಗೆ ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಸುಮಾರು ನಾಲ್ಕು ಕಿಲೋಮೀಟರ್ ಉದ್ದದ ಈ ರಸ್ತೆಯಲ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಮಾತ್ರ ಕಾಂಕ್ರೀಟ್‌ ಹಾಕಲಾಗಿದೆ. ಉಳಿದ ಕಡೆ ಜಲ್ಲಿ ಹಾಕಿ ಬಿಡಲಾಗಿದೆ.

‘ಜಲ್ಲಿ ಹಾಕಿ ವರ್ಷ ಕಳೆದರೂ ಡಾಂಬರು ಹಾಕಿಲ್ಲ. ಜಲ್ಲಿ ಎಲ್ಲ ಎದ್ದು ವಾಹನ ಸಂಚಾರ ಹಾಗೂ ಜನ ಸಂಚಾರಕ್ಕೆ ಅಡಚಣೆ ಮಾಡಿದೆ. ವಾಹನಗಳು ಓಡಾಡುವಾಗ ಕಲ್ಲುಗಳು ಸಿಡಿಯುತ್ತವೆ. ದೂಳು ಏಳುತ್ತದೆ. ರಸ್ತೆ ಬದಿಯ ಮನೆ, ತೋಟಗಳಿಗೂ ದೂಳು ಆವರಿಸಿದೆ’ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

‘ಯಾವ ಇಲಾಖೆ ಕಾಮಗಾರಿ ನಿರ್ವಹಿಸುತ್ತಿದೆ, ಎಷ್ಟು ಹಣಕ್ಕೆ ರಸ್ತೆ ಕಾಮಗಾರಿ ಕ್ರಿಯಾ ಯೋಜನೆ ಮಾಡಲಾಗಿದೆ, ಎಂಜಿನಿಯರ್ ಯಾರು ಎಂಬ ಮಾಹಿತಿ ಇಲ್ಲ. ನಾವು ಶೀಘ್ರ ರಸ್ತೆ ಸರಿಪಡಿಸಿ ಎಂದು ಯಾರಿಗೆ ದೂರುವುದು’ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.

‘ಈ ರಸ್ತೆಯಲ್ಲಿ ಹಾಲಿನ ವಾಹನಗಳು, ಶಾಲಾ ವಾಹನಗಳು, ನಾಲ್ಕೈದು ಗ್ರಾಮಗಳ ಜನರು ನಿತ್ಯ ಸಂಚರಿಸುತ್ತಾರೆ. ಆದರೆ ವರ್ಷಗಳೇ ಉಳಿದರು ರಸ್ತೆ ಸರಿಪಡಿಸದೆ ಹೋಗಿರುವುದು ಸರಿಯಲ್ಲ’ ಎಂದರು ಸ್ಥಳೀಯ ರಮೇಶ್.

ನರಸೀಪುರ ತೋಪಿನ ಮಧುಗಿರಿ ಮುಖ್ಯರಸ್ತೆಯಿಂದ ಎಲೆಕ್ಯಾತನಹಳ್ಳಿ ಮುಖ್ಯರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಜಲ್ಲಿ ಹರಡಿರುವುದು
ನರಸೀಪುರ ತೋಪಿನ ಮಧುಗಿರಿ ಮುಖ್ಯರಸ್ತೆಯಿಂದ ಎಲೆಕ್ಯಾತನಹಳ್ಳಿ ಮುಖ್ಯರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಜಲ್ಲಿ ಹರಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.