ADVERTISEMENT

ರಸ್ತೆ ಡಾಂಬರೀಕರಣಕ್ಕೆ ಶಾಸಕ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 14:09 IST
Last Updated 18 ಸೆಪ್ಟೆಂಬರ್ 2020, 14:09 IST
₹8 ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು
₹8 ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು   

ದೊಡ್ಡಬಳ್ಳಾಪುರ:‘ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ 159 ಕಿಲೋಮೀಟರ್‌ ಉದ್ದದ ತಾಲ್ಲೂಕಿನ ವಿವಿಧ ರಸ್ತೆಗಳನ್ನು ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿ ಮೇಲ್ದರ್ಜೆಗೆ ಏರಿಸಲು ಆದೇಶ ನೀಡಿದೆ’ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ನಗರದ ರಂಗಪ್ಪ ವೃತ್ತದಿಂದ ನೆಲಮಂಗಲ ರಸ್ತೆಯ ಕನಕದಾಸ ವೃತ್ತ ರಸ್ತೆ ಡಾಂಬರೀಕರಣ, ಹೈಟೆಕ್ ಫುಟ್‍ಪಾತ್ ಕಾಮಗಾರಿ ಹಾಗೂ ಬಸವ ಭವನ ವೃತ್ತದಿಂದ ಚಿಕ್ಕಬಳ್ಳಾಪುರ ರಸ್ತೆಯ ನಂದಿ ಮೋರಿವರೆಗೆ ಡಾಂಬರೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಲೋಕೋಪಯೋಗಿ ಇಲಾಖೆ ₹8 ಕೋಟಿ ಅನುದಾನದಲ್ಲಿ ರಸ್ತೆ ವಿಸ್ತರಣೆ ಮಾಡಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಎರಡು ತಿಂಗಳ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವ ಜವಾಬ್ದಾರಿ ಗುತ್ತಿಗೆದಾರರಾಗಿದ್ದು, ಗುಣಮಟ್ಟದಲ್ಲಿ ರಾಜಿ ಇಲ್ಲ’ ಎಂದರು.

ADVERTISEMENT

‘ಬಸವ ಭವನದಿಂದ ತಾಲ್ಲೂಕು ಕಚೇರಿ ಮೂಲಕ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದು ಹಾಗೂ ಕಳಪೆ ಗುಣಮಟ್ಟದ ಕಾಮಗಾರಿ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ರಸ್ತೆ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ರಸ್ತೆ ಬದಿಯಲ್ಲಿನ ಕೆಲ ಖಾಸಗಿ ವ್ಯಕ್ತಿಗಳು ಅಡ್ಡಿಪಡಿಸಿದ್ದರಿಂದಾಗಿ ಕಾಮಗಾರಿ ವಿಳಂಬವಾಗಿದೆ. ರಸ್ತೆ ಗುಣಮಟ್ಟವನ್ನು ಸದ್ಯದಲ್ಲೆ ಪರಿಶೀಲನೆ ನಡೆಸಿ ಲೋಪಗಳು ಕಂಡ ಬಂದರೆ ಸರಿಪಡಿಸಲು ಸೂಚಿಸಲಾಗುವುದು. ಇಂದು ಶಂಕುಸ್ಥಾಪನೆ ಮಾಡಲಾಗಿರುವ ₹8 ಕೋಟಿ ಕಾಮಗಾರಿಯು ಎರಡು ತಿಂಗಳಲ್ಲಿ ಮುಕ್ತಾಯವಾಗಲಿದೆ. ರಸ್ತೆ ಬದಿಯಲ್ಲಿ ದಶಕಗಳಿಂದ ಬೆಳೆದು ನಿಂತಿರುವ ಬೃಹತ್‌ ಮರಗಳನ್ನು ಕತ್ತರಿಸದೆ ಕಾಮಗಾರಿ ನಡೆಸಲು ಸೂಚನೆ ನೀಡಲಾಗಿದೆ’ ಎಂದರು.

ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ‘ರಾಜ್ಯದಲ್ಲಿ ಹೆಚ್ಚಿನ ಉದ್ದದ ರಸ್ತೆಯನ್ನು ನಮ್ಮ ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆಗೆ ಮೇಲ್ದರ್ಜೆಗೆ ಏರಿಸಲು ಆದೇಶ ನೀಡಿರುವುದು ಸಂತಸದ ಸುದ್ದಿಯಾಗಿದೆ. ಇದರಿಂದ ಗ್ರಾಮೀಣ ಭಾಗದ ರಸ್ತೆಗಳು ಉತ್ತಮವಾಗಲಿವೆ’ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಜಯರಾಂ, ಸದಸ್ಯ ಹಸನ್‌ಘಟ್ಟ ರವಿ, ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಂ.ಬೈರೇಗೌಡ, ಕಸಬಾ ಬ್ಲಾಕ್‌ ಅಧ್ಯಕ್ಷ ವೆಂಕಟೇಶ್‌, ಮುಖಂಡರಾದ ಬಿ.ಎಚ್.ಕೆಂಪಣ್ಣ, ತಿ.ರಂಗರಾಜು, ಕೆ.ಪಿ.ಜಗನ್ನಾಥ್‌, ಡಿ.ವಿ.ಅಶ್ವತ್ಥಪ್ಪ, ಆದಿತ್ಯ ನಾಗೇಶ್‌, ಪು.ಮಹೇಶ್‌, ಬಷೀರ್‌, ವಾಹಿದ್‌, ಮಧು, ರೇವತಿ ಅನಂತರಾಂ, ಹೇಮಂತ್‌ರಾಜ್‌, ಅಂಜಮೂರ್ತಿ, ರಾಘವೇಂದ್ರ, ಬಿ.ಮುನಿರಾಜು, ಕೇಶವ, ಶಿವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.