
ದೊಡ್ಡಬಳ್ಳಾಪುರ: ರಸ್ತೆಗಳ ಅಭಿವೃದ್ಧಿ ಕಾಮಗಾರಿ, ಡಾಂಬರೀಕರಣ ಮುಗಿದು ಒಂದೂವರೆ ವರ್ಷ ಕಳೆಯುವಷ್ಟರಲ್ಲೇ ಗುಂಡಿಗಳು ಬೀಳುತ್ತಿವೆ. ಆದರೆ ಟೆಂಡರ್ ನಿಯಮದಂತೆ ಎರಡುವರೆ ವರ್ಷಗಳ ಕಾಲ ಗುತ್ತಿಗೆ ಪಡೆದವರೇ ರಸ್ತೆ ನಿರ್ವಹಣೆ ಮಾಡಬೇಕು. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಈ ಬಗ್ಗೆ ಸೂಕ್ತ ನಿಗಾವಹಿಸದೇ ಇರುವುದೇ ರಸ್ತೆಗಳಲ್ಲಿ ಗುಂಡಿ ಬೀಳಲು ಕಾರಣ ಎಂದು ಶಾಸಕ ಧೀರಜ್ ಮುನಿರಾಜ್ ಅಸಮಧಾನ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿ, ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಸುಳ್ಳು ಮಾಹಿತಿ ನೀಡಲಾಗಿದೆ. ಈ ವರ್ಷ ಯಾವ ರಸ್ತೆಯಲ್ಲಿ ಎಷ್ಟು ಗುಂಡಿಗಳನ್ನು ಗುರುತಿಸಲಾಗಿದೆ ಎನ್ನುವುದು ಸೇರಿದಂತೆ ಗುಂಡಿಗಳನ್ನು ಮುಚ್ಚಿದ ನಂತರ ಪೋಟೋಗಳ ಸಮೇತ ಮಾಹಿತಿ ನೀಡಬೇಕು ಎಂದರು.
‘ತಾಲ್ಲೂಕಿನ ತಿಪ್ಪೂರು ಮೂಲಕ ಕನಕೇನಹಳ್ಳಿವರೆಗಿನ ರಸ್ತೆ ಕಾಮಗಾರಿಗೆ ಶಾಸಕನಾಗಿ ಆಯ್ಕೆಯಾದ ಮೊದಲಿಗೆ ಗುದ್ದಲಿ ಪೂಜೆ ಮಾಡಲಾಗಿತ್ತು. ಎರಡು ವರ್ಷಗಳು ಕಳೆದರು ಸಹ 10 ಕಿ.ಮೀ ರಸ್ತೆ ಕಾಮಗಾರಿ ಮುಗಿಸಿಲ್ಲ. ಈ ಭಾಗದ ಗ್ರಾಮಗಳ ಜನರು ತಾಲ್ಲೂಕು ಕೇಂದ್ರಕ್ಕೆ ಬಂದು ಹೋಗಲು ನರಕಯಾತನ ಅನುಭವಿಸುವಂತಾಗಿದೆ. ಎಂಜಿನಿಯರ್‌ಗಳು ಸೂಕ್ತ ಮೇಲುಸ್ತುವಾರಿ ಮಾಡದೇ ಇರುವುದೇ ಕಾಮಗಾರಿ ನಿದಾನಗತಿಯಲ್ಲಿ ನಡೆಯಲು ಕಾರಣವಾಗಿದೆ’ ಎಂದರು.
ನೆಲಮಂಗಳ ರಸ್ತೆಯ ಅರಳುಮಲ್ಲಿಗೆ ಕೆರೆ ಏರಿ ಮೇಲಿನ ರಸ್ತೆ ಡಾಂಬರೀಕರಣ ನಡೆದು ಒಂದು ವರ್ಷ ಕಳೆಯುವುದರಲ್ಲೇ ಹಾಳಾಗಿದೆ. ಈ ಬಗ್ಗೆ ಗುತ್ತಿಗೆದಾರರಿಗೆ ನೋಟಿಸ್ ಜಾರಿಗಳಿಸಲು ಸೂಚನೆ ನೀಡಿದರು. ಚಿಕ್ಕಬಳ್ಳಾಪುರ ರಸ್ತೆಯಲ್ಲಿನ ರಾಜಘಟ್ಟ ಕೆರೆ ಏರಿ ಮೇಲಿನ ರಸ್ತೆ ಕಾಮಗಾರಿಯು ಸಹ ವಿಳಂಬವಾಗಿದೆ. ಇದರಿಂದ ನಂದಿಬೆಟ್ಟದ ಕಡೆಗೆ ಹೋಗುವ ಪ್ರವಾಸಿಗರು ಹಾಗೂ ಈ ಭಾಗದ ಗ್ರಾಮಗಳ ಜನರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಈ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ತುರ್ತಾಗಿ ಮುಗಿಸುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಸೂಚಿಸಿದರು.
ನಿರ್ಮಿತಿ ಕೇಂದ್ರ ವತಿಯಿಂದ ತಾಲ್ಲೂಕಿನಲ್ಲಿ ನಿರ್ಮಿಸಲಾಗುತ್ತಿರುವ 22 ಅಂಗನವಾಡಿ ಕೇಂದ್ರಗಳ ಕಾಮಗಾರಿ ಅರ್ಧಕ್ಕೆ ನಿಂತಿವೆ. ಇದರಿಂದ ಪುಟ್ಟ ಮಕ್ಕಳು ಸರಿಯಾಗಿ ಕುಳಿತುಕೊಳ್ಳಲು, ಶೌಚಾಲಯಕ್ಕೆ ಹೋಗಲು ಸ್ಥಳ ಇಲ್ಲದಂತಾಗಿದೆ. ಅಂಗನವಾಡಿ ಕಟ್ಟಡಗಳ ಕಾಮಗಾರಿ ಅರ್ಧಕ್ಕೆ ನಿಂತಿರುವ ಗ್ರಾಮ ಪಂಚಾಯಿತಿಗಳಲ್ಲಿನ ಪಿಡಿಓಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಳುಕು ಅಧ್ಯಕ್ಷ ವಿಶ್ವನಾಥರೆಡ್ಡಿ, ತಹಶೀಲ್ದಾರ್ ಮಲ್ಲಪ ಕೆ.ಯರಗೋಳ, ತಾಲ್ಲೂಕು ಪಂಚಾಯಿತಿ ಆಡಳಿತ ಅಧಿಕಾರಿ ರಾಮಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಹರ್ತಿ, ನಗರಸಭೆ ಪೌರಾಯುಕ್ತ ಕಾರ್ತೀಕೇಶ್ವರ್ ಇದ್ದರು.
ತಾಲ್ಲೂಕು ಕಚೇರಿ ಕಟ್ಟಡ ನಿರ್ವಹಣೆ ಯಾರದ್ದು ತಾಲ್ಲೂಕು ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳ ಕಟ್ಟಡ ದುರಸ್ತಿ ನಿರ್ವಹಣೆ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯದ್ದು. ಆದರೆ ಇಲ್ಲಿನ ತಾಲ್ಲೂಕು ಕಚೇರಿ ಒಳಗಿನ ಕಟ್ಟಡದ ದುರಸ್ತಿ ಮತ್ತಿತರೆ ಕೆಲಸಗಳ ಬಗ್ಗೆ ಪ್ರಶ್ನೆ ಮಾಡಿದರೆ ಯಾವ ಇಲಾಖೆಯವರು ನಮ್ಮ ಜವಾಬ್ದಾರಿ ಇಲ್ಲ ಎಂದರೆ ಯಾರು ಕಟ್ಟಡ ನಿರ್ವಹಣೆ ಮಾಡುವುದು ಎಂದು ಅಧಿಕಾರಿಗಳನ್ನು ಶಾಸಕ ಧೀರನ್ ಮುನಿರಾಜು ಪ್ರಶ್ನಿಸಿದರು. ಉಪವಿಭಾಗಾಧಿಕಾರಿಗಳ ಕಚೇರಿ ಎರಡನೇ ಮಹಡಿಯಲ್ಲಿದೆ. ಇಲ್ಲಿನ ನ್ಯಾಯಾಲಯಕ್ಕೆ ಹಿರಿಯ ನಾಗರೀಕರು ಅಂಗವಿಕಲರು ಹೋಗಿ ಬರುವುದೇ ದುಸ್ತರವಾಗಿದೆ. ಇಲ್ಲಿ ತುರ್ತಾಗಿ ಲಿಫ್ಟ್ ಅಥವಾ ರ್ಯಾಂಪ್ ಹಾಕುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಲೋಕೋಪಯೋಗಿ ಎಂಜಿನಿಯರ್‌ಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.