ADVERTISEMENT

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಮುನ್ನೆಚ್ಚರಿಕೆ

ಆವರಣದ ಸುತ್ತ ರಾಸಾಯನಿಕ ಕೀಟ ನಾಶಕ ಸಿಂಪಡಣೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 13:50 IST
Last Updated 19 ಮಾರ್ಚ್ 2020, 13:50 IST
ಬನ್ನೇರುಘಟ್ಟ ಜೈವಿಕ ಉದ್ಯಾನದ ಸ್ವಚ್ಛತೆಯಲ್ಲಿ ತೊಡಗಿರುವ ಸಿಬ್ಬಂದಿ
ಬನ್ನೇರುಘಟ್ಟ ಜೈವಿಕ ಉದ್ಯಾನದ ಸ್ವಚ್ಛತೆಯಲ್ಲಿ ತೊಡಗಿರುವ ಸಿಬ್ಬಂದಿ   

ಆನೇಕಲ್: ‘ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕೊರೊನಾ ಮತ್ತು ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜೈವಿಕ ಉದ್ಯಾನದ ವೈದ್ಯ ಡಾ.ಉಮಾಶಂಕರ್‌ ತಿಳಿಸಿದ್ದಾರೆ.

‘ಪ್ರಾಣಿ ಆರೋಗ್ಯ ಸಲಹಾ ಸಮಿತಿಯ ಜಂಟಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಜೈವಿಕ ಸುರಕ್ಷತಾ ಕ್ರಮಗಳನ್ನು ಉದ್ಯಾನವನದಲ್ಲಿ ಬಿಗಿಗೊಳಿಸಲು ತೀರ್ಮಾನಿಸಲಾಗಿದೆ. ಅದರಂತೆ ಉದ್ಯಾನವನದ ಆವರಣದ ಸುತ್ತಲೂ ಹೊರ ಮತ್ತು ಒಳ ಭಾಗದಲ್ಲಿ ಪೊಟಾಷಿಯಂ ಪರ್ಮಾಂಗನೇಟ್ ದ್ರಾವಣ ಸಿಂಪಡಿಸಲಾಗಿದೆ. ಸುಣ್ಣದ ಪುಡಿಯನ್ನು ರಸ್ತೆಯ ಇಕ್ಕೆಲಗಳಲ್ಲಿ ಹಾಕಲಾಗಿದೆ. ಪ್ರಾಣಿಯ ಆವರಣಗಳು ಮತ್ತು ಪಕ್ಷಿ ಆವರಣಗಳಿಗೆ ಔಷಧ ಸಿಂಪಡಿಸಲಾಗಿದೆ’ ಎಂದರು.

‘ಪಕ್ಷಿಗಳ ಹಿಕ್ಕೆ ಮತ್ತು ಜೈವಿಕ ಉದ್ಯಾನದ ವ್ಯಾಪ್ತಿಯಲ್ಲಿ ಸತ್ತ ಪಕ್ಷಿಗಳ ಬಗ್ಗೆ ನಿಗಾ ವಹಿಸಲಾಗಿದೆ. ಇವುಗಳನ್ನು ಸಂಗ್ರಹಿಸಿ ಹೆಬ್ಬಾಳದ ಪ್ರಾಣಿ ಸಂಶೋಧನಾ ಕೇಂದ್ರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಹಕ್ಕಿ ಜ್ವರ ಅಥವಾ ಕೊರೊನಾ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಬನ್ನೇರುಘಟ್ಟ ಉದ್ಯಾನದಲ್ಲಿ ಯಾವುದೇ ಪ್ರಕರಣಗಳು ಇದುವರೆಗೆ ವರದಿಯಾಗಿಲ್ಲ. ಪಕ್ಷಿಗಳು ಪ್ರತ್ಯೇಕ ಆವರಣದಲ್ಲಿವೆ. ಹಾಗಾಗಿ ಅವುಗಳು ಬೇರೆ ಸಂಪರ್ಕಕ್ಕೆ ಸಿಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ’ ಎಂದರು.

ADVERTISEMENT

‘ಪಕ್ಷಿ ಪಾಲಕರು, ಪ್ರಾಣಿ ಪಾಲಕರು ಆವರಣವನ್ನು ಪ್ರವೇಶಿಸುವ ಸ್ಯಾನಿಟೈಸರ್‌ನಿಂದ ಕೈತೊಳೆದುಕೊಂಡು ಹೋಗಬೇಕು. ಪ್ರತಿ ಸಿಬ್ಬಂದಿಗೂ ಮಾಸ್ಕ್‌ ನೀಡಲಾಗಿದೆ. ಈ ಮೂಲಕ ಉದ್ಯಾನದಲ್ಲಿ ಸಂಪೂರ್ಣ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ವಹಿಸಲಾಗಿದೆ’ ಎಂದರು.

‘ಪ್ರವೇಶದ್ವಾರ, ನಿರ್ಗಮನ ದ್ವಾರಗಳಲ್ಲಿ ಸೋಂಕು ನಿವಾರಕ ದ್ರಾವಣ ತುಂಬಲಾಗಿದೆ. ಎಲ್ಲಾ ಪ್ರಾಣಿ ಪಾಲಕರು, ಸಿಬ್ಬಂದಿ ವಾಹನಗಳು ಸೋಂಕು ನಿವಾರಕದ ದ್ರಾವಣದ ಮೂಲಕ ಹಾದು ಹೋಗುವಂತೆ ಮಾಡಲಾಗಿದೆ. ಎಲ್ಲಾ ದಾರಿಗಳು ಮತ್ತು ಪ್ರಾಣಿ ಆವರಣದ ಸುತ್ತಲೂ ರೋಗ ಹರಡದಂತೆ ತಡೆಯಲು ಸುಣ್ಣ ಸಿಂಪಡಿಸಲಾಗಿದೆ ಮತ್ತು ಅಂಟಿವೈರಲ್‌ ರೋಗ ನಿವಾರಕ ದ್ರಾವಣವನ್ನು ಸಿಂಪಡಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.