
ವಿಜಯಪುರ(ದೇವನಹಳ್ಳಿ): ಪ್ರಸ್ತಕ ಸಾಲಿನ ಮೊದಲ ಹಬ್ಬ ಮಕರ ಸಂಕ್ರಾಂತಿ ಹಬ್ಬಕ್ಕೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ. ಮಂಗಳವಾರ ಪಟ್ಟಣದ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಕಬ್ಬು, ಗೆಣಸು, ಕಡಲೆಕಾಯಿ, ಅವರೆಕಾಯಿ, ಹೂವಿನ ಮಾರಾಟ ಜೋರಾಗಿ ಕಂಡು ಬಂತು. ಆದರೆ ಹೂವಿನ ಬೆಲೆಗಳು ಗಗನ ಮುಖಿಯಾಗಿದೆ.
ಕನಕಾಂಬರ ₹1,200(ಕೆ.ಜಿಗೆ), ಮಲ್ಲಿಗೆ 1,600ಕ್ಕೆ ಏರಿಕೆಯಾಗಿದೆ. ಸೇವಂತಿಗೆ ₹120, ರೋಜಾ ₹150, ಚೆಂಡು ಹೂವು ₹40, ಕಾಕಡ ₹800ಗೆ ಮಾರಾಟವಾದವು.
ಪಟ್ಟಣದ ಶಿವಗಣೇಶ ವೃತ್ತ, ಹಳೆ ಸರ್ಕಾರಿ ಆಸ್ಪತ್ರೆ ರಸ್ತೆ, ಬಸ್ ನಿಲ್ದಾಣ, ವೆಂಕಟರಮಣಸ್ವಾಮಿ ದೇವಾಲಯದ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಂಕ್ರಾಂತಿ ಹಬ್ಬದ ವ್ಯಾಪಾರ ಭರಾಟೆ ಜೋರಾಗಿತ್ತು. ಶಿವಗಣೇಶ ಸರ್ಕಲ್ನಲ್ಲಿ ಕಬ್ಬು ರಾಶಿಗಟ್ಟಲೇ ತಂದಿಡಲಾಗಿತ್ತು. ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ತಾವು ತಂದಿದ್ದ ವಸ್ತುಗಳ ರಾಶಿ ಹಾಕಿಕೊಂಡು ಗ್ರಾಹಕರನ್ನು ಸೆಳೆಯುವ ಕಸರತ್ತು ನಡೆಸಿದ್ದರು.
ಬಾಗಿನ ಸಾಮಾಗ್ರಿಗಳ ಜತೆಗೆ ಎಳ್ಳು, ಅಚ್ಚು ಬೆಲ್ಲ, ಸಕ್ಕರೆ ಅಚ್ಚು, ಕಬ್ಬಿನ ಜಲ್ಲೆ, ಎಳ್ಳು-ಬೆಲ್ಲ ಮಿಶ್ರಣ ಮಾಡಿದ ಪ್ಯಾಕೆಟ್‍ಗೆ ಬೇಡಿಕೆ ಇತ್ತು. ಹಬ್ಬದ ಖರೀದಿಗೆ ಬಂದ ಜನರ ದಟ್ಟಣೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.
ಮಾರುಕಟ್ಟೆಯಲ್ಲಿ ಜೋಡಿ ಕಬ್ಬು ₹100 ರಿಂದ ₹120 ರವರೆಗೆ ಮಾರಾಟವಾಗುತ್ತಿತ್ತು. ಕಡಲೆಕಾಯಿ ಕೆ.ಜಿಗೆ ₹100, 2.5 ಕೆ.ಜಿ ಅವರೆಕಾಯಿ ₹100, ಗೆಣಸು ಕೆ.ಜಿಗೆ ₹50 ಇದ್ದರೆ ಹೂವಿನ ಬೆಲೆ ಸ್ವಲ್ಪ ಏರಿಕೆಯಾಗಿತ್ತು. ದಾಳಿಂಬೆ ಕೆ.ಜಿ ₹140, ಸೇಬು ₹180, ಮೂಸಂಬಿ ₹100, ದ್ರಾಕ್ಷಿ ₹80, ಏಲಕ್ಕಿ ಬಾಳೆ ಹಣ್ಣು ₹60, ಅನಾನಸ್ ₹70 ಗಳಂತೆ ಮಾರಾಟವಾಗುತ್ತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.