
ದೇವನಹಳ್ಳಿ: ತಾಲ್ಲೂಕಿನ ರಾಯಸಂದ್ರ ಗ್ರಾಮದಲ್ಲಿ ಮಕರ ಸಂಕ್ರಾಂತಿಯನ್ನು ಸಡಗರದಿಂದ ಗುರುವಾರ ಆಚರಿಸಲಾಯಿತು.
ಗ್ರಾಮದ ದೇವಾಲಯ ಹಾಗೂ ಪ್ರಮುಖ ಬೀದಿಗಳಲ್ಲಿ ಹಬ್ಬದ ವಾತಾವರಣದಿಂದ ಕೂಡಿತ್ತು. ಮನೆ ಮನೆಗಳಲ್ಲಿ ಬಾಗಿಲಿಗೆ ರಂಗೋಲಿ ಬಿಡಿಸಿ ಎಳ್ಳು–ಬೆಲ್ಲ ಹಂಚಿಕೊಳ್ಳಲಾಯಿತು.
ಗೋವುಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿ, ಕಿಚ್ಚು ಹಾಯಿಸುವ ಪರಂಪರೆ ಆಚರಿಸಲಾಯಿತು. ಸುಗ್ಗಿ ಹಬ್ಬದ ಮಹತ್ವವನ್ನು ಹೊಸ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಮಕ್ಕಳು ಹಾಗೂ ಯುವಕರು ಹಬ್ಬದ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿಸುವ ಆಟಗಳು, ಸಂಪ್ರದಾಯಬದ್ಧ ಉಡುಪು ಹಾಗೂ ಹಬ್ಬದ ಅಡುಗೆ ಪದಾರ್ಥಗಳು ಸಂಕ್ರಾಂತಿ ಸೊಗಡು ಹೆಚ್ಚಿಸಿತು. ಹಿರಿಯರು ಮಕ್ಕಳಿಗೆ ಸಂಕ್ರಾಂತಿ ಮಹತ್ವ, ರೈತರ ಬದುಕು ಮತ್ತು ಪ್ರಕೃತಿಯೊಂದಿಗೆ ಮನುಷ್ಯನ ನಂಟಿನ ಕುರಿತು ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.