ADVERTISEMENT

ಅಭಿವೃದ್ಧಿಗೆ ತೆರೆದುಕೊಂಡ ಸಪ್ತ ಗ್ರಾಮಸ್ಥರು

ಸಮಗ್ರ ಗ್ರಾಮಾಭಿವೃದ್ಧಿಗೆ ಭಾಷ್ ಸಂಸ್ಥೆ ಶ್ರಮ * ಸ್ವಉದ್ಯೋಗ, ಮಹಿಳಾ ಸಬಲೀಕರಣಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 12:41 IST
Last Updated 5 ಜನವರಿ 2019, 12:41 IST
ಭಾಷ್ ಪ್ರತಿಷ್ಠಾನದಿಂದ ಟೈಲರಿಂಗ್ ತರಬೇತಿ ಪಡೆಯುತ್ತಿರುವ ಮಹಿಳೆಯರು
ಭಾಷ್ ಪ್ರತಿಷ್ಠಾನದಿಂದ ಟೈಲರಿಂಗ್ ತರಬೇತಿ ಪಡೆಯುತ್ತಿರುವ ಮಹಿಳೆಯರು   

ಆನೇಕಲ್: ಸಮಗ್ರ ಗ್ರಾಮಾಭಿವೃದ್ಧಿ ಕನಸು ಭಾಷ್ ಪ್ರತಿಷ್ಠಾನದ ಮೂಲಕ ಸಾಕಾರವಾಗುತ್ತಿದೆ. ತಾಲ್ಲೂಕಿನ ಹುಸ್ಕೂರು ಶಾಂತಿಪುರ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಉದ್ಯೋಗ, ಶಿಕ್ಷಣ, ಪರಿಸರ ಸಂರಕ್ಷಣೆ, ಜಲಸಂರಕ್ಷಣೆ, ಯುವ ಸಬಲೀಕರಣ ವಿಷಯವಾಗಿ ಜನರನ್ನು ಜಾಗೃತಿಗೊಳಿಸಿ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವ ಕೆಲಸವೂ ಸದ್ದಿಲ್ಲದೆ ಸಾಗಿದೆ.

ಭಾಷ್ ಇಂಡಿಯಾ ಪ್ರತಿಷ್ಠಾನ ಹಾಗೂ ನಾಗನಾಥಪುರ ಭಾಷ್ ಆಟೋಮೊಟಿವ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೆಟ್‌ ಲಿಮಿಟೆಡ್ ಸಂಸ್ಥೆಗಳು ಇಂಥ ಕೆಲಸ ಮಾಡುತ್ತಿವೆ. 2016ರಲ್ಲಿ ಆನೇಕಲ್ ತಾಲ್ಲೂಕಿನ ಹುಸ್ಕೂರು, ಗಟ್ಟಹಳ್ಳಿ, ಚಿಕ್ಕನಾಗಮಂಗಲ, ಚಿಂತಲಮಡಿವಾಳ, ರಾಮಸಾಗರ, ಮುತ್ತಾನಲ್ಲೂರು, ಸಿಂಗೇನಗ್ರಹಾರ ಸೇರಿದಂತೆ ಏಳು ಗ್ರಾಮಗಳಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ಎಂಟು ಕ್ಷೇತ್ರಗಳಲ್ಲಿ ಕಂಪನಿ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿ, ಜನರ ವಿಶ್ವಾಸ ಗಳಿಸಿದೆ.

ಯುವಜನರು ನಿರ್ದಿಷ್ಟ ಗುರಿ, ಉದ್ದೇಶ ಇಲ್ಲದೆ ಅರಳಿಕಟ್ಟೆ ಮೇಲೆ ಹರಟೆಯಲ್ಲಿ ಕಾಲಹರಣ ಮಾಡುತ್ತಿದ್ದರು. ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗಿದ್ದರು. ಅವರೆಲ್ಲರನ್ನೂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗಿದೆ. ಇದರಿಂದ ಹಲವು ಮಂದಿ ಸ್ವಯಂ ಉದ್ಯೋಗದಲ್ಲಿ ನೆಲೆ ಕಂಡುಕೊಂಡಿದ್ದಾರೆ ಎಂದು ಸಮುದಾಯ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸರಾವ್ ಮಾಹಿತಿ ನೀಡಿದರು.

ADVERTISEMENT

ಭಾಷ್ ಕಂಪನಿ ಆಯ್ಕೆ ಮಾಡಿಕೊಂಡಿರುವ ಏಳು ಗ್ರಾಮಗಳಲ್ಲಿ ಆಸಕ್ತ ಮಹಿಳೆಯರಿಗೆ ಬೆಂಗಳೂರಿನ ಆಡುಗೋಡಿಯಲ್ಲಿ ಹೈಟೆಕ್ ತರಬೇತಿ ನೀಡಿ ಸ್ವಯಂ ಉದ್ಯೋಗ ಕಲ್ಪಿಸಲಾಗಿದೆ. ಕೆಲ ಗೃಹಿಣಿಯರು ಹೊಲಿಗೆ ತರಬೇತಿಯಲ್ಲಿ ಆಸಕ್ತಿ ತೋರಿದರು. ಪರಿಣಾಮ, 93 ಮಂದಿ ಗಾರ್ಮೆಂಟ್ಸ್‌ನಲ್ಲಿ ಉದ್ಯೋಗ ಪಡೆದಿದ್ದಾರೆ. ಕೆಲವರು ಸ್ವಂತ ಅಂಗಡಿ ತೆರೆದು ಬದುಕು ಕಟ್ಟಿಕೊಂಡಿದ್ದಾರೆ.

ಶಿಕ್ಷಣದಿಂದ ಪರಿವರ್ತನೆ: ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ 17ಸರ್ಕಾರಿ ಶಾಲೆಗಳಲ್ಲಿ 14 ಮಂದಿ ಸಂಪನ್ಮೂಲ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಹುಸ್ಕೂರಿನಲ್ಲಿ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿ ಸಂಪೂರ್ಣ ವೆಚ್ಚವನ್ನು ಭಾಷ್ ಪ್ರತಿಷ್ಠಾನ ಭರಿಸುತ್ತಿದೆ.

ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಪಡಿಸುವ ಸಲುವಾಗಿ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಆನೇಕಲ್ ತಾಲ್ಲೂಕಿನ 62 ಶಿಕ್ಷಕರಿಗೆ ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ನೀಡಲಾಗಿದೆ. ಈ ಮೂಲಕ ಶಿಕ್ಷಕರಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಂಸ್ಥೆ ನೆರವಾಗಿದೆ. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ.

ಸ್ವಸಹಾಯ ಸಂಘದ ಮಹಿಳೆಯರಿಗೆ ಪುಸ್ತಕ ನಿರ್ವಹಣೆ, ಆಡಿಟ್, ಟೈಲರಿಂಗ್, ಬ್ಯೂಟಿಷಿಯನ್ ಹಾಗೂ ಬೇಕರಿ ತರಬೇತಿ ನೀಡಿ ಉದ್ಯೋಗ ಪಡೆಯುವಲ್ಲಿ ಸಂಸ್ಥೆ ನೆರವು ನೀಡಿದೆ. ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಏಳು ಗ್ರಾಮಗಳಲ್ಲಿ ಕೈಗೊಳ್ಳಲಾಗಿದೆ. ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸಾ ಕಾರ್ಯಕ್ರಮದಡಿಯಲ್ಲಿ ತಾಲ್ಲೂಕಿನ 800 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಶಿಬಿರ ನಡೆಸಲಾಗಿದೆ.

ಜನರಲ್ಲಿ ಸ್ವಯಂ ಉದ್ಯೋಗ ಹಾಗೂ ಕೌಶಲ ಅಭಿವೃದ್ಧಿಗೆ ಭಾಷ್ ಪ್ರತಿಷ್ಠಾನ ತನ್ನದೇ ಸಾಧನೆ ಮಾಡಿದ್ದು ಸಪ್ತ ಗ್ರಾಮಗಳ ಜನರು ಅಭಿವೃದ್ಧಿಗೆ ತೆರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.