ADVERTISEMENT

ಆನೇಕಲ್ | ಸರ್ಜಾಪುರ ಭೂ ಸ್ವಾಧೀನ ವಿರೋಧಿ ಹೋರಾಟ: ರೈತ ಹೋರಾಟಕ್ಕೆ ವಕೀಲರ ಬೆಂಬಲ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 3:01 IST
Last Updated 15 ಆಗಸ್ಟ್ 2025, 3:01 IST
ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ವಕೀಲರು ಭಾಗವಹಿಸಿದರು
ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ವಕೀಲರು ಭಾಗವಹಿಸಿದರು   

ಆನೇಕಲ್: ‌ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ವಕೀಲರ ಸಂಘದ ಬೆಂಬಲ ನೀಡಿದೆ. 

70ಕ್ಕೂ ಹೆಚ್ಚು ವಕೀಲರು ಹಸಿರು ಶಾಲು ಹೊದ್ದು ರೈತರೊಂದಿಗೆ ಪ್ರತಿಭಟನೆ ನಡೆಸಿ ತಮ್ಮ ಬೆಂಬಲ ಸೂಚಿಸಿದರು. ಭೂಸ್ವಾಧೀನಕ್ಕೆ ಒಳಪಟ್ಟ ಗ್ರಾಮಗಳಿಗೆ ಬೈಕ್‌ ರ‍್ಯಾಲಿ ನಡೆಸಿದರು.

ವಕೀಲರ ಸಂಘದ ಅಧ್ಯಕ್ಷ ವೈ.ಪ್ರಕಾಶ್‌ ಪಟಾಪಟ್‌, ರೈತರು ದೇಶದ ಜೀವಾಳ. ಫಲಾವತ್ತಾದ ಕೃಷಿ ಭೂಮಿ ಕೈಗಾರಿಕೆಗೆ ನೀಡುವುದರಿಂದ ರೈತರ ಬದುಕಿಗೆ ಪೆಟ್ಟು ಬೀಳಲಿದೆ. ಜೊತೆಗೆ ಪರಿಸರಕ್ಕೆ ಹಾನಿಯಾಗಲಿದೆ.  ವಕೀಲರು ರೈತರ ಋಣದಲ್ಲಿದ್ದೇವೆ. ರೈತರಿಂದ ಪ್ರತಿಯೊಬ್ಬರು ಆಹಾರ ಸೇವಿಸುತ್ತಿದ್ದಾರೆ. ಹೀಗಾಗಿ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಎಂದು ತಿಳಿಸಿದರು.

ADVERTISEMENT

ಹಸಿರು ಶಾಲುಗಳನ್ನು ಹೊತ್ತು ವಿಧಾನಸೌಧಕ್ಕೆ ಹೋಗುವ ರಾಜಕಾರಣಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಖಂಡನೀಯ. ರೈತರನ್ನು ಬೀದಿಯಲ್ಲಿ ನಿಲ್ಲಿಸಿ ರೈತಪರ ಸರ್ಕಾರ ಎಂದು ಬಡಾಯಿಕೊಚ್ಚಿಕೊಳ್ಳುವುದರಿಂದ ಯಾವ ಉಪಯೋಗವಿಲ್ಲ. ಈಗಾಗಲೇ ಕೈಗಾರಿಕೆಗಳಿಂದ ಕೆರೆಗಳಿಗೆ ಕಂಟಕ ಎದುರಾಗಿದೆ. ಈಗ ಮತ್ತೆ ಕೈಗಾರಿಕೆಗಳನ್ನು ನಿರ್ಮಿಸುವುದರಿಂದ ಪರಿಸರ ಮಾತ್ರವಲ್ಲದೆ ಜನ ಜೀವನದ ಮೇಲೂ ಪೆಟ್ಟು ಬೀಳಲಿದೆ ಎಂದು ಹೇಳಿದರು.

ವಕೀಲರ ಸಂಘದ ಉಪಾಧ್ಯಕ್ಷ ಹರೀಶ್, ಪ್ರಧಾನ ಕಾರ್ಯದರ್ಶಿ ರವೀಶ್, ಖಜಾಂಚಿ ಶಾರದಮಣಿ, ವಕೀಲರ ಸಂಘದ ನಿರ್ದೇಶಕರಾದ ಮೋಹನ್‌ ಕಾಂತ, ಪುರುಷೋತ್ತಮ್‌, ಸತೀಶ್‌, ಮೋಹನ್‌, ಉದಯ್‌, ಮುರಳಿ, ನೀಲಮ್ಮ, ನಾಗರತ್ನ, ನಿರ್ಮಲಾ, ಹಿರಿಯ ವಕೀಲರಾದ ಬಾಲರೆಡ್ಡಿ, ಎಚ್‌.ಶ್ರೀನಿವಾಸ್‌, ರಮೇಶ್‌, ಹರೀಶ್, ಸಂಪಂತ್‌, ಮಹೇಶ್ ಬಾಬು, ಶ್ರೀನಿವಾಸ್‌ ಸರ್ಜಾ, ಜಯರಾಮ್‌, ಮರಸೂರು ರಮೇಶ್, ಮುಖಂಡರಾದ ದೇವರಾಜು, ಜಯಪ್ರಕಾಶ್‌, ಚಿನ್ನಪ್ಪ.ವೈ.ಚಿಕ್ಕಹಾಗಡೆ, ಹರೀಶ್‌, ವಿಶ್ವನಾಥರೆಡ್ಡಿ ಇದ್ದರು.

ರೈತರ ಹೋರಾಟ ಬೆಂಬಲಿಸಿ ವಕೀಲರು ಬೈಕ್ ರ‍್ಯಾಲಿ ನಡೆಸಿದರು
ಸ್ವಾಧೀನಕ್ಕೆ ಉದ್ದೇಶಿತ ಜಾಗ ಫಲವತ್ತಾದ ಭೂಮಿಯಾಗಿದೆ. ತರಕಾರಿ ಹೂವು ಹಣ್ಣುಗಳ ಬೆಳೆ ಹೆಚ್ಚು ಬೆಳೆಯುತ್ತಾರೆ. ಈ ಪ್ರದೇಶವನ್ನು ಕೈಗಾರಿಕೆಗೆ ನೀಡುವುದನ್ನು ಯಾರು ಒಪ್ಪುವುದಿಲ್ಲ
ವಕೀಲರ ಸಂಘ ಆನೇಕಲ್‌

ರೈತರಿಗೆ ಉಚಿತ ಕಾನೂನು ಸೇವೆ

‘ರೈತರ ಹೋರಾಟದ ಕಿಚ್ಚು ಹೆಚ್ಚಾಗಿದೆ. ಹೋರಾಟದ ರೂಪುರೇಷಗಳು ಬದಲಾಗುತ್ತಿವೆ. ರೈತರು ಶಾಂತಿಪ್ರಿಯರು. ಆದರೆ ನಮ್ಮ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ತಾಲ್ಲೂಕಿನ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕುವ ಮೂಲಕ ಹೋರಾಟ ನಡೆಸಲಾಗುವುದು. ರೈತ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದರೆ ವಕೀಲರು ಉಚಿತವಾಗಿ ವಕಾಲತು ಹಾಕಲಾಗುವುದು. ರೈತರಿಗೆ ಬೆಂಬಲ ನೀಡುವ ಸಲುವಾಗಿ ನ್ಯಾಯಾಲಯದ ಕಲಾಪಗಳನ್ನು ಬಿಟ್ಟು ನಿಮ್ಮೊಂದಿಗೆ ಬಂದಿದ್ದೇವೆ’ ಎಂದು ವಕೀಲರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.