ADVERTISEMENT

ಸಾಸಲು ಚಿನ್ನಮ್ಮ ದೈವಿ ಸ್ವರೂಪ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 5:07 IST
Last Updated 18 ಆಗಸ್ಟ್ 2022, 5:07 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮಲ್ಲಿ ಜಾನಪದ ವಿದ್ವಾಂಸ ಸಣ್ಣನಾಗಪ್ಪ ಮಾತನಾಡಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮಲ್ಲಿ ಜಾನಪದ ವಿದ್ವಾಂಸ ಸಣ್ಣನಾಗಪ್ಪ ಮಾತನಾಡಿದರು   

ಸಾಸಲು (ದೊಡ್ಡಬಳ್ಳಾಪುರ ತಾಲ್ಲೂಕು): ‘ಸಾಸಲು ಚಿನ್ನಮ್ಮ ಕುರಿತು ಜನಪದ ಸಾಹಿತ್ಯದಲ್ಲಿ ಕಥೆ, ಕಾವ್ಯ, ನಾಟಕಗಳಿವೆ. ಸಾಸಲು ಸೇರಿದಂತೆ ತುಮಕೂರು ಜಿಲ್ಲೆಯ ಪಾವಗಡ, ಆಂಧ್ರಪ್ರದೇಶದ ಅನಂತಪುರ ಮುಂತಾದ ಕಡೆಗಳಲ್ಲಿ ಸಾಸಲು ಚಿನ್ನಮ್ಮ ಕುರಿತ ಜನಪದ ಸಾಹಿತ್ಯ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ’ ಎಂದು ಜಾನಪದ ವಿದ್ವಾಂಸ ಸಣ್ಣನಾಗಪ್ಪ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕದಿಂದ ಸಾಸಲು ಗ್ರಾಮ ದಲ್ಲಿ ನಡೆದ ಸಾಸಲು ಚಿನ್ನಮ್ಮ ವಿಶೇಷ ಉಪನ್ಯಾದಲ್ಲಿ ಮಾತನಾಡಿದರು.

ಸಾಸಲು ಚಿನ್ನಮ್ಮನ ಹೆಸರಿನಲ್ಲಿ ನಿರ್ಮಾಣವಾಗಿರುವ ಕೆರೆಗಳು, ಬಾವಿಗಳು, ದೇವಾಲಯಗಳು ಆಕೆಯ ಸಮಾಜಮುಖಿ ಕಾರ್ಯ ಗಳಿಗೆ ಸಾಕ್ಷಿಯಾಗಿವೆ. ತವರುಮನೆ ಯಾದಪಾವಗಡದಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಗ್ರಾಮಕ್ಕೆ ಮದುವೆಯಾಗಿ ಬಂದ ಚಿನ್ನಮ್ಮ ಗಂಡನ ಮನೆಯವರು ಕೊಡುತ್ತಿದ್ದ ಕಷ್ಟಗಳನ್ನು ದೈವಭಕ್ತಿಯಿಂದ ಪಾರು ಮಾಡಿಕೊಳ್ಳುತ್ತಾಳೆ. ದೈವಭಕ್ತಿಯ ಅನನ್ಯತೆಯಿಂದ ಜನರು ಚಿನ್ನಮ್ಮನಲ್ಲಿ ದೈವಿಕ ಅಂಶಗಳನ್ನು ಕಾಣತೊಡಗುತ್ತಾರೆ ಎಂದರು.

ADVERTISEMENT

ಈ ಗ್ರಾಮದಲ್ಲಿ ಇಂದಿಗೂ ಚಿನ್ನಮ್ಮನ ಹೆಸರಿನಲ್ಲಿ ದೇವಾಲಯ, ಕೆರೆ ಇದೆ. ಚಿನ್ನಮ್ಮನನ್ನು ಗಂಡನ ಕಡೆಯವರು ಮನೆಯಿಂದ ಹೊರ ಹಾಕಿದಾಗ ಗುಡಿಸಿನಲ್ಲಿ ವಾಸವಾಗಿದ್ದ ಸ್ಥಳದ ಅವಶೇಷಗಳಿವೆ. ಆಕೆ ಬಳಸುತ್ತಿದ್ದ ರಾಗಿ ಕಲ್ಲು, ಒಳಕಲ್ಲುಗಳನ್ನು ಕಾಣಬಹುದಾಗಿದೆ ಎಂದರು.

ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ನೇತ್ರಾವತಿ ಮಾತನಾಡಿ, ಜನ ಪದ ಸಾಹಿತ್ಯ ಅಧ್ಯಯನವು ಗ್ರಾಮೀಣ ಬದುಕಿನ ಇತಿಹಾಸ ಅರಿಯಲು ಸಹಾಯವಾಗುತ್ತದೆ ಎಂದರು.

ಕೊಂಗಾಡಿಯಪ್ಪ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಸ್. ಬೋರಪ್ಪ ಮಾತನಾಡಿ, ಸಾಹಿತ್ಯದ ಓದಿನಿಂದ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷ ದೊರೆಯುತ್ತದೆ ಎಂದ ಅವರು, ಜನಪದರು ಕೃಷಿ ಚಟುವಟಿಕೆ ಮಾಡುವಾಗ ಜನಪದ ಹಾಡುಗಳನ್ನು ಹಾಡುತ್ತಿದ್ದ ಸನ್ನಿವೇಶಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಪಿ‌. ಗೋವಿಂದರಾಜು, ಉಪನ್ಯಾಸಕ ಬಸವರಾಜು, ಸಾಸಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರೇಗೌಡ, ಮುಖಂಡ ರವಿಚಂದ್ರ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.