ADVERTISEMENT

ಸಾವನದುರ್ಗ: ಕೇಬಲ್ ಕಾರ್ ಅಳವಡಿಕೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 16:30 IST
Last Updated 12 ಡಿಸೆಂಬರ್ 2019, 16:30 IST
ಮಾಗಡಿ ಕೆಂಪೇಗೌಡರ ಪುತ್ಥಳಿಗೆ ಡಿಸಿಎಂ.ಡಾ.ಅಶ್ವತ್ಥನಾರಾಯಣ ಪೂಜೆ ಸಲ್ಲಿಸಿದರು
ಮಾಗಡಿ ಕೆಂಪೇಗೌಡರ ಪುತ್ಥಳಿಗೆ ಡಿಸಿಎಂ.ಡಾ.ಅಶ್ವತ್ಥನಾರಾಯಣ ಪೂಜೆ ಸಲ್ಲಿಸಿದರು   

ಮಾಗಡಿ: ಕೆಂಪೇಗೌಡರ ವಂಶಜರ ಜನೋಪಯೋಗಿ ಆಡಳಿತ ನಾಡಿಗೆ ಆಶಾಕಿರಣವಿದ್ದಂತೆ. 42ಸ್ಮಾರಕಗಳ ಅಭಿವೃದ್ಧಿಗೆ ₹3ಕೋಟಿ ವೆಚ್ಚದಲ್ಲಿ ನೀಲನಕ್ಷೆ ತಯಾರಿಸಲು ಇಂಡೆಕ್ಸ್ ಸಂಸ್ಥೆಗೆ ವಹಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಪಟ್ಟಣದ ಕೋಟೆ ಬಯಲಿನಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿಯಿಂದ ಗುರುವಾರ ನಡೆದ ಕೆಂಪೇಗೌಡರ 511ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಬಿಎಂಆರ್‌ಡಿಯಲ್ಲಿ ವಿಲೀನಗೊಳಿಸಿ ದುರ್ಗ,ಕೋಟೆಕೊತ್ತಲ, ಅರಮನೆ, ಸೆರೆಮನೆ, ಗುಡಿ–ಗೋಪುರ, ಕೆರೆ –ಕಟ್ಟೆಕಲ್ಯಾಣಿ ಜೀರ್ಣೊದ್ಧಾರಗೊಳಿಸಲಾಗಿದೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನದ ಬಳಿ ವಿಶ್ವದ ಗಮನ ಸೆಳೆಯುವ ಕೆಂಪೇಗೌಡ ಗೋಪುರ ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಸಾವನದುರ್ಗ ಬೆಟ್ಟದ ಮೇಲೆ ಬೃಹತ್ ಗೋಪುರ ನಿರ್ಮಿಸಿ ಕೇಬಲ್ ಕಾರ್ ಅಳವಡಿಸಲಾಗುವುದು ಎಂದರು.

ADVERTISEMENT

ಎಲ್ಲ ಸಮುದಾಯಗಳಿಗೆ ಸಮಾನ ಗೌರವ ನೀಡಿದ್ದ ಕೆಂಪೇಗೌಡ ಅವರು ಪ್ರತಿಯೊಂದು ಜಾತಿ ಹೆಸರಿನಲ್ಲಿ ಪೇಟೆಗಳನ್ನು ನಿರ್ಮಿಸಿ, ವ್ಯಾಪಾರ ವಹಿವಾಟಿಗೆ ಅನುಕೂಲ ಕಲ್ಪಿಸಿದ್ದರು. ಅವರ ಜಯಂತ್ಯುತ್ಸವ ಆಚರಣೆ ನಾಡಿನ ಜನರಿಗೆ ಹೆಮ್ಮೆ ಸಂಗತಿ. ಬಿಎಂಆರ್‌ಡಿ ವತಿಯಿಂದ ಬೆಂಗಳೂರಿನ ಸುತ್ತಲಿನ ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲು ವರ್ತುಲ ರಸ್ತೆ ನಿರ್ಮಿಸಲಾಗುತ್ತಿದೆ. ಮಾಗಡಿ ಅಭಿವೃದ್ಧಿಗೆ ಎಲ್ಲರ ಸಹಕಾರರಿಂದ ಶ್ರಮಿಸಲಾಗುವುದು ಎಂದರು.

ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಮಾತನಾಡಿ, ಕೆಂಪೇಗೌಡರ ವಂಶಜರ ಸ್ಮಾರಕ ಅಭಿವೃದ್ಧಿ ಪಡಿಸಬೇಕು. ಯುವಜನರಿಗೆ ಉದ್ಯೋಗ ನೀಡಲು ಕೈಗಾರಿಕೆ ಆರಂಭಿಸಬೇಕು. ಸಾವನದುರ್ಗ ಅಭಿವೃದ್ಧಿಡಿಸಿ ಪ್ರವಾಸಿ ತಾಣವನ್ನಾಗಿಸಬೇಕು ಎಂದರು.

ವಿಜಯನಗರ ಶಾಖಾಮಠಾಧೀಶ ಸೌಮ್ಯನಾಥಸ್ವಾಮೀಜಿ, ಗುಮ್ಮಸಂದ್ರ ಮಠದ ಚಂದ್ರಶೇಖರ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಕುಮಾರ ಚಂದ್ರಶೇಖರಸ್ವಾಮೀಜಿ. ಕಳ್ಳಿಪಾಳ್ಯ ರಂಗನಾಥಾನಂದಸ್ವಾಮೀಜಿ, ಸಿದ್ದಲಿಂಗಸ್ವಾಮಿ, ತಹಶೀಲ್ದಾರ್‌ ಎನ್‌.ರಮೇಶ್, ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯಲೋಕೇಶ್, ಬಿಜೆಪಿ ಮುಖಂಡರಾದ ಎ.ಎಚ್.ಬಸವರಾಜು, ರಂಗಧಾಮಯ್ಯ, ಚಿತ್ರನಟ ವಿನೋದ್ ಪ್ರಭಾಕರ್, ನಿವೃತ್ತ ಶಿಕ್ಷಕ ರೇವಣ್ಣ, ಸೀನಪ್ಪ, ನಾಯ್ಡು, ಮೋಹನ್, ಆನಂದ್, ದೊಡ್ಡಿಗೋಪಿ ಇದ್ದರು. ಸಾಧಕರನ್ನು ಸನ್ಮಾನಿಸಲಾಯಿತು.

ಪುರಸಭೆ ಆವರಣದಲ್ಲಿ ಇರುವ ಕೆಂಪೇಗೌಡರ ಪುತ್ಥಳಿಗೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಬಸ್ ನಿಲ್ದಾಣ ಪ್ರವೇಶದಂತೆ ಖಾಸಗಿ ಮತ್ತು ಸರ್ಕಾರಿ ಬಸ್‌ಗಳನ್ನು ಬಿ.ಕೆ.ರಸ್ತೆ ಹೊಂಬಾಳಮ್ಮನಕೆರೆ ಬಳಿ ತಡೆಹಿಡಿಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.