ADVERTISEMENT

ದೊಡ್ಡಬಳ್ಳಾಪುರ: ಸಾವಿತ್ರಿ ಬಾ ಫುಲೆ ಸ್ಮರಣೆ   

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 14:09 IST
Last Updated 19 ಜನವರಿ 2020, 14:09 IST
ನಿವೃತ್ತ ಪ್ರಾಧ್ಯಾಪಕಿ  ಕೆ.ಸುಲೋಚನಮ್ಮ ವೆಂಕಟರೆಡ್ಡಿ ಮಾತನಾಡಿದರು
ನಿವೃತ್ತ ಪ್ರಾಧ್ಯಾಪಕಿ  ಕೆ.ಸುಲೋಚನಮ್ಮ ವೆಂಕಟರೆಡ್ಡಿ ಮಾತನಾಡಿದರು   

ದೊಡ್ಡಬಳ್ಳಾಪುರ: ‘ಸಾವಿತ್ರಿ ಬಾ ಫುಲೆ ಎಂಬ ಅಕ್ಷರದವ್ವ 19ನೇ ಶತಮಾನದಲ್ಲೇ ತ್ಯಾಗ, ದೈರ್ಯ, ಸಾಹಸ ತೋರದಿದ್ದರೆ ಇಂದು ನಾವಿಲ್ಲಿ ನಿಂತು ಮಾತನಾಡುವ ಸ್ಥಿತಿಯಲ್ಲಿ ಇರುತ್ತಿರಲಿಲ್ಲ’ ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡರು ಹಾಗೂ ನಿವೃತ್ತ ಪ್ರಾಧ್ಯಾಪಕಿ ಕೆ.ಸುಲೋಚನಮ್ಮ ವೆಂಕಟರೆಡ್ಡಿ ಹೇಳಿದರು.

ಅವರು ನಗರದ ಮಹಿಳಾ ಸಮಾಜದಲ್ಲಿ ಸಾವಿತ್ರಿ ಬಾ ಪುಲೇ ಅಕ್ಷರದವ್ವನ ನೆನಪು ಮತ್ತು ಚಿಂತನೆಗಳು ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾ ಫುಲೆ ಅವರು ತನ್ನ ಗಂಡ ಜ್ಯೋತಿ ಬಾ ಪುಲೇ ಅವರಿಂದ ವಿದ್ಯೆ ಕಲಿತು ಹೆಣ್ಣು ಮಕ್ಕಳಿಗೆ ಅಕ್ಷರ ದಾಸೋಹ ಮಾಡಿದ ಮಹಿಳೆಯರ ಜ್ಞಾನದೀವಿಗೆಯಾಗಿ ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಮಿನುಗುವಂತಾಗಲು ಸಾಧ್ಯವಾಯಿತು. ಮಹಿಳೆಯರು ಎಲ್ಲರಂತೆ ದುಡಿಮೆ ಮಾಡುತ್ತಾ ಆರ್ಥಿಕ ಸಮಾನತೆಯನ್ನು ಪಡೆಯಲು ಅಕ್ಷರ ಕಲಿತಿದ್ದೇ ಮೂಲ ಕಾರಣವಾಗಿದೆ. ಹೀಗಾಗಿ ಮಹಿಳಾ ಸಮುದಾಯ ಆಧುನಿಕ ಭಾರತದಲ್ಲಿ ಸಕ್ರಿಯವಾಗಲು ಬೇಕಿದ್ದ ತಳಪಾಯ ನಿರ್ಮಿಸಿದ್ದೇ ಸಾವಿತ್ರಿ ಬಾ ಪುಲೆ ಅವರು ಎಂದು ಸ್ಮರಿಸಿದರು.

ADVERTISEMENT

ಅಕ್ಷರ ದಾಸೋಹ ತಾಲ್ಲೂಕು ಸಹಾಯಕ ನಿರ್ದೇಶಕಿ ಎಚ್‌.ಎಸ್‌.ದಾಕ್ಷಾಯಿಣಿ ಮಾತನಾಡಿ, ‘ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದಿದ್ದ ಸಾವಿತ್ರಿ ಬಾ ಫುಲೆ ಅವರು ವಿವಾಹದ ನಂತರ ಅಕ್ಷರ ಕಲಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಮಹಿಳೆಯರ ಶಿಕ್ಷಣಕ್ಕಾಗಿ ಸಮಾಜ ಕೊಟ್ಟ ಅನೇಕ ಕಷ್ಟಕೊಟಲೆಗಳನ್ನು ಮೀರಿ ನಾವೆಲ್ಲರೂ ನೆನೆಯುವಂಥ ಕೆಲಸ ಮಾಡಿದ್ದಾರೆ’ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್‌.ಪ್ರಭಾ ಮಾತನಾಡಿ, ಮಹಿಳೆಯರಿಗೆ ಈ ಹಿಂದೆ ಅನೇಕ ನಿಷಿದ್ಧಗಳಿದ್ದವು. ಇವರ ಸಮಕಾಲಿನವರೇ ಆಗಿದ್ದ ರಾಜಾರಾಮ ಮೋಹನ್‌ರಾಯ್‌ ಅವರಂತ ಸಮಾಜ ಸುಧಾರಾಕರು ಸತಿ ಸಹಗಮನ, ಬಾಲ್ಯ ವಿವಾಹ ಇಂತ ಅನಿಷ್ಠಗಳನ್ನು ಬ್ರಿಟಿಷ್‌ ಸರ್ಕಾರದ ಸಹಕಾರದಿಂದ ತೊಡೆದು ಹಾಕಿದರು. ಬಾ ಪುಲೇ ದಂಪತಿಗಳು ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಮಹಿಳೆಯ ಬದುಕಿಗೆ ಘನತೆ, ಗೌರವ ತಂದುಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಕಾರ್ಯದರ್ಶಿ ಎಲ್‌.ಸಿ.ದೇವಕಿ, ಉಪಾಧ್ಯಕ್ಷೆ ಕೆ.ಜಿ.ಕವಿತ, ಖಜಾಂಚಿ ಜಿ.ವಿ.ಯಶೋದ, ನಿರ್ದೇಶಕರಾದ ಎಂ.ಕೆ.ವತ್ಸಲ, ವಿ.ನಿರ್ಮಲ, ಟಿ.ಪಿ.ವರಲಕ್ಷ್ಮೀ, ಎಸ್‌.ಗೌರಮ್ಮ, ಬಿ.ಎ.ಗಿರಿಜ, ರಾಜ್ಯ ರೈತ ಸಂಘದ ಉಮಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.