ADVERTISEMENT

ಸರಣಿ ವರದಿಗಳೇ ಕೆರೆ ಅಭಿವೃದ್ದಿಗೆ  ಸ್ಪೂರ್ತಿ

​ಪ್ರಜಾವಾಣಿ ವಾರ್ತೆ
Published 12 ಮೇ 2019, 13:28 IST
Last Updated 12 ಮೇ 2019, 13:28 IST
ಮೇಳೆಕೋಟೆ ಗ್ರಾಮದ ಕೆರೆಗೆ ಭಾನುವಾರ ಮಜರಾಹೊಸಹಳ್ಳಿ ಗ್ರಾಮಸ್ಥರು ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು
ಮೇಳೆಕೋಟೆ ಗ್ರಾಮದ ಕೆರೆಗೆ ಭಾನುವಾರ ಮಜರಾಹೊಸಹಳ್ಳಿ ಗ್ರಾಮಸ್ಥರು ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು   

ದೊಡ್ಡಬಳ್ಳಾಪುರ: ‘ನಮ್ಮೂರಿನ ಕೆರೆಯನ್ನು ಅಭಿವೃದ್ಧಿಪಡಿಸಲು ಕೆರೆ ಸುತ್ತಲಿನ ಎಲ್ಲ ಗ್ರಾಮಗಳ ಯುವಕರು ಹಾಗೂ ಹಿರಿಯರು ಸೇರಿದಂತೆ ಸುಮಾರು 50 ಜನ ತಾಲ್ಲೂಕಿನ ಮೆಳೇಕೋಟೆ, ಚನ್ನಾಪುರ ಗ್ರಾಮದ ಕೂಸಮ್ಮನ ಕೆರೆಗಳಿಗೆ ಭಾನುವಾರ ಭೇಟಿ ನೀಡಿ ಬಂದಿದ್ದೇವೆ’ ಎಂದು ವೀರಾಪುರ ಗ್ರಾಮದ ಯುವಕ ಶಿವಕುಮಾರ್‌, ಬಸವರಾಜು, ಮಜರಾಹೊಸಹಳ್ಳಿ ಗ್ರಾಮದ ಮೋಹನ್‌, ಸಂದೇಶ್‌, ಸಂತೋಷ್‌,ಶ್ರೀನಿವಾಸ್‌, ರವಿಕುಮಾರ್, ಚಿಕ್ಕತುಮಕೂರು ಗ್ರಾಮದ ಆಂಜಿನಪ್ಪ, ರಾಜಣ್ಣ ಹೇಳಿದರು.

‘ಕೈಗಾರಿಕಾ ಪ್ರದೇಶದಲ್ಲಿನ ಮಜರಾಹೊಸಹಳ್ಳಿ ಕೆರೆ 150 ಎಕರೆ ವಿಸ್ತೀರ್ಣದಲ್ಲಿದೆ. ಈ ಕೆರೆಯಲ್ಲಿ ನೀರು ಸಂಗ್ರಹವಾದರೆ ವೀರಾಪುರ, ತಿಪ್ಪಾಪುರ, ಚಿಕ್ಕತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮಗಳ ಕುಡಿಯುವ ನೀರಿನ ದಾಹ ಹಾಗೂ ರೈತರ ಕೊಳವೆ ಬಾವಿಗಳಲ್ಲೂ ಅಂತರ್ಜಲ ಹೆಚ್ಚಾಗಲಿದೆ’ ಎಂದರು.

ಸರ್ಕಾರದ ಯಾವುದೇ ಅನುದಾನ ಇಲ್ಲದೆಯೂ ಸಹ ಕೆರೆಗಳನ್ನು ಅಭಿವೃದ್ದಿ ಪಡಿಸುತ್ತಿರುವ ಬಗ್ಗೆ ಒಂದು ವಾರದಿಂದ ಪ್ರಜಾವಾಣಿ ಪತ್ರಿಕೆಯಲ್ಲಿ ‘ಕೆರೆ ಉಳಿಸಿ ಅಂತರ್ಜಲ ಹೆಚ್ಚಿಸಿ’ ಸರಣಿ ವರದಿಗಳನ್ನು ಓದುತ್ತಿದ್ದೆವು. ಜಿಲ್ಲಾಧಿಕಾರಿ ಕರೀಗೌಡ ಅವರನ್ನು ಭೇಟಿ ಮಾಡಿ ನಮ್ಮೂರಿನ ಕೆರೆ ಅಭಿವೃದ್ದಿಗೂ ಮುಂದೆ ನಿಂತುಕೊಳ್ಳುವಂತೆ ಮನವಿ ಮಾಡಿದ್ದೆವು. ಆದರೆ ಜಿಲ್ಲಾಧಿಕಾರಿಗಳು ಕೆರೆ ಕಾಮಗಾರಿ ಪ್ರಾರಂಭಕ್ಕೂ ಮುನ್ನ ತಾಲ್ಲೂಕಿನಲ್ಲಿ ಕೆಲಸ ನಡೆಯುತ್ತಿರುವ ಕೆರೆಗಳಿಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದರು. ಹೀಗಾಗಿ ಭಾನುವಾರ ಕೆರೆ ಸುತ್ತಲಿನ ನಾಲ್ಕು ಗ್ರಾಮಗಳ ಜನರು ಕಾಮಗಾರಿ ನಡೆಯುತ್ತಿರುವ ಕೆರೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇವೆ. ಮೇ 14ರಂದು ಬೆಳಿಗ್ಗೆ 8ಕ್ಕೆ ಮಜರಾಹೊಸಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆಸಿ ಕಾಮಗಾರಿಗೆ ಸಮಯ ನಿಗದಿಪಡಿಸಲಾಗುವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.