ADVERTISEMENT

ಬೆಂಕಿಗೆ ಆಹುತಿಯಾದ ಪುಷ್ಪ ಕೃಷಿ

ಹೂಗಳಿಗೆ ಇಲ್ಲ ಮಾರುಕಟ್ಟೆ , ಕೊರೊನಾ, ಲಾಕ್‌ಡೌನ್‌ ತಂದ ಸಂಕಷ್ಟ, ಬೆಳೆಗಾರರ ಬವಣೆ

ವಡ್ಡನಹಳ್ಳಿ ಬೊಜ್ಯನಾಯ್ಕ
Published 18 ಏಪ್ರಿಲ್ 2020, 14:54 IST
Last Updated 18 ಏಪ್ರಿಲ್ 2020, 14:54 IST
ಹೂವಿನ ಗಿಡಗಳನ್ನು ಕೊಯ್ಲು ಮಾಡಿ ಬೆಂಕಿಗೆ ಹಾಕುತ್ತಿರುವ ರೈತ
ಹೂವಿನ ಗಿಡಗಳನ್ನು ಕೊಯ್ಲು ಮಾಡಿ ಬೆಂಕಿಗೆ ಹಾಕುತ್ತಿರುವ ರೈತ   

ದೇವನಹಳ್ಳಿ: ಕೊರೊನಾ ವೈರಸ್‌ ಹರಡುವುದನ್ನು ನಿಯಂತ್ರಿಸಲು ಹೇರಿದ ಲಾಕ್‌ಡೌನ್‌ ಪುಷ್ಪ ಕೃಷಿಕರನ್ನು ಇನ್ನಿಲ್ಲದಂತೆ ಕಾಡಿದೆ. ಸಂಕಷ್ಟದಿಂದ ಪಾರಾಗಲು ಯಾವುದೇ ಮಾರ್ಗೋಪಾಯಗಳು ಯಾರ ಬಳಿಯೂ ಇಲ್ಲ. ಇದರಿಂದ ಹತಾಶೆಗೊಂಡ ರೈತರು ತಾವು ಪೋಷಿಸಿ ಮಕ್ಕಳಂತೆ ಸಲಹಿ ಬೆಳೆಸಿದ ಹೂ ತೋಟಕ್ಕೇ ಬೆಂಕಿ ಹಚ್ಚುತ್ತಿದ್ದಾರೆ.

ದೇವನಹಳ್ಳಿತಾಲ್ಲೂಕು ಸುಗಂಧರಾಜ ಹೂ ಕೃಷಿಗೆ ಪ್ರಸಿದ್ಧಿ ಪಡೆದಿದೆ. ಕಳೆದ ಮೂರು ದಶಕದಿಂದ ಎಲ್ಲಾ ರೀತಿಯ ತರಾವರಿ ಪುಷ್ಪಗಳು ಮತ್ತು ತರಕಾರಿ ಬೆಂಗಳೂರು ನಗರಕ್ಕೆ ಸರಬರಾಜು ಮಾಡುತ್ತಿದೆ. ಪೂರೈಕೆಯ ಶೇಕಡ 30ರಷ್ಟು ಪಾಲು ತಾಲ್ಲೂಕಿನದ್ದೇ. ದಶಕಗಳಿಂದ ಹಸನುಗೊಳಿಸಿ ಕಾಪಿಟ್ಟು ಬೆಳೆಸಿದ ತೋಟಗಳಿಗೆ ಬೆಂಕಿ ಹಾಕಿ ಇತರ ಕೃಷಿಯತ್ತ ಹೊರಳದಿದ್ದರೆ ಬೇರೆ ದಾರಿಯಿಲ್ಲ ಎಂದು ರೈತರು ಭಾವಿಸಿದ್ದಾರೆ.

ಇದಕ್ಕೆ ಬಲವಾದ ಕಾರಣಗಳು ಎರಡು. ಮಾರುಕಟ್ಟೆ ಮತ್ತು ಅದನ್ನು ಕೊಳ್ಳುವವರು. ಕೊರೊನಾ ಕಾಲಿಟ್ಟ ನಂತರ ಗಿಡಗಳಲ್ಲೇ ಹೂಗಳು ಬಾಡಿದವು. ತರಕಾರಿಗಳು ಕೊಳೆತು ಮಣ್ಣಾದವು. ಇದೀಗ ಸಕಾಲದಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲದ್ದರಿಂದ ರಸ್ತೆ, ಬೀದಿ, ಜಮೀನುಗಳಲ್ಲಿ ರಾಶಿ ಹೂ ಗಿಡಗಳನ್ನು ಸುರಿದು ಬೆಂಕಿ ಹಚ್ಚಲಾಗುತ್ತಿದೆ. ಹೂ ಕೊಳ್ಳುವ ಮಂದಿ ಇಲ್ಲದ ಮೇಲೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಸಾಧ್ಯವೇ ಎಂಬುದು ರೈತರ ಪ್ರಶ್ನೆಯಾಗಿದೆ.

ADVERTISEMENT

ಹಬ್ಬ– ಮದುವೆ ನಡೆಯುತ್ತಿಲ್ಲ:ಯುಗಾದಿ ನಂತರ ಮದುವೆ, ಜಾತ್ರೆ, ಗೃಹ ಪ್ರವೇಶ ಮೊದಲಾದ ಶುಭ ಸಮಾರಂಭಗಳು ಒಮ್ಮೆಲೆ ಬರುವುದರಿಂದ ಪುಷ್ಪ ಕೃಷಿಗೆ ಬಹಳ ಬೇಡಿಕೆ ಇರುತ್ತಿತ್ತು. ಕೊರೊನಾ ವೈರಸ್‌ ಹೂಗಳನ್ನು ಬಾಡಿಸಿದೆ. ಮಾರುಕಟ್ಟೆಯಲ್ಲಿ ಹೂ ಕೇಳುವವರಿಲ್ಲ. ರೈತರಿಗೆ ಪಾಸ್‌ ನೀಡಿದ್ದೇವೆ, ಮಾರುಕಟ್ಟೆಗೆ ತೆರಳಲು ಅವಕಾಶ ನೀಡಿದ್ದೇವೆ ಎನ್ನುವ ಜನಪ್ರತಿನಿಧಿಗಳು ಮಾತ್ರ ನಮ್ಮ ಹೂ ಕೊಳ್ಳಬೇಕಷ್ಟೇ ಎಂದು ರೈತರು ವ್ಯಂಗ್ಯವಾಡುತ್ತಾರೆ.

ಕೆಂಡವಾದ ಕನಕಾಂಬರ:‘ಅರ್ಧ ಎಕರೆಯಲ್ಲಿ ಕನಕಾಂಬರ ಹೂವಿನ ಗಿಡ ನಾಟಿ ಮಾಡಿದ್ದೆ. ಇದಕ್ಕೆ ಎಲ್ಲಾ ಹೂವಿಗಿಂತ ಅತಿ ಹೆಚ್ಚು ಬೆಲೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮಧ್ಯವರ್ತಿಗಳು ತಾ ಮುಂದು ನಾ ಮುಂದು ಎಂದು ಕೈಯಿಂದಲೇ ಕಿತ್ತು ಕೊಳ್ಳಲು ಬರುತ್ತಿದ್ದರು.ಕೆ.ಜಿ. ಹೂವಿಗೆ ₹ 200 ರಿಂದ 300 ಇತ್ತು. ಈಗ ಕೆ.ಜಿ ಹೂವನ್ನು ₹ 20ಗೆ ಕೊಡುತ್ತೇನೆ ತೆಗೆದುಕೊಂಡು ಹೋಗಿ ಎಂದರೂ ಯಾರು ಬರುತ್ತಿಲ್ಲ. ವರಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ₹ 1500ಕ್ಕೆ ಮನೆ ಹತ್ತಿರ ಬಂದೇ ಖರೀದಿಸುವವರಿದ್ದರು. ಆ ಬೆಲೆ ಯಾವಾಗ ಬರಲಿದೆ? ಎಂದುಅಣ್ಣೇಶ್ವರ ಗ್ರಾಮದ ರೈತ ಮುನಿರಾಜು ಆಕಾಶ ನೋಡುತ್ತಾರೆ.

‘ಎಲ್ಲಾ ಮಾದರಿಯ ಹೂ ಗಿಡಗಳನ್ನು ಬಹುತೇಕ ರೈತರು ಬುಡ ಸಮೇತ ಕಿತ್ತು ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಪೂರೈಕೆ ಕಡಿಮೆಯಾಗಿ ಹೂ ಬೇಡಿಕೆ ಹೆಚ್ಚಾದರೂ ಅಚ್ಚರಿ ಇಲ್ಲ. ಈಗ ಹೊಸದಾಗಿ ಬೆಳೆಸಿದರೂ ಮೂರು ತಿಂಗಳು ಹೂವು ಬರಲು ಕಾಲವಕಾಶ ಬೇಕು. ಹೂವು ಬೇಕು ಎಂದಾಕ್ಷಣ ಪ್ರತ್ಯಕ್ಷವಾಗಲ್ಲ. ಸರ್ಕಾರ ಯಾರಿಗೆ ಅನುಕೂಲ ಮಾಡುತ್ತಿದೆ ಎಂಬುದಂತೂ ಗೊತ್ತಾಗುತ್ತಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.