ಪ್ರಾತಿನಿಧಿಕ ಚಿತ್ರ
ದೊಡ್ಡಬಳ್ಳಾಪುರ: ತಾಲ್ಲೂಕಿನ ಮೆಳೇಕೋಟೆಯ ಮಹರ್ಷಿ ವಾಲ್ಮೀಕಿ ಗುರುಕುಲ ಪೀಠದ ಬ್ರಹ್ಮಾನಂದ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಶನಿವಾರ ಲೈಂಗಿಕ ಕಿರುಕುಳ ದೂರು ನೀಡಿದ್ದಾರೆ. ಮಹಿಳೆ ವಿರುದ್ಧ ಸ್ವಾಮೀಜಿಯೂ ಪ್ರತಿ ದೂರು ದಾಖಲಿಸಿದ್ದಾರೆ.
ಹಲವು ಬಾರಿ ಆಡಿಯೊ ಹಾಗೂ ವಿಡಿಯೊ ಕಾಲ್ ಮಾಡಿ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದಾರೆ. ತನ್ನ ಬಳಿ ಇರುವ ವಿಡಿಯೊ ಹಾಗೂ ಆಡಿಯೊ ಇದ್ದು ಅವುನ್ನು ಅಳಿಸಿ ಹಾಕಿದರೆ ₹50 ಸಾವಿರ ನೀಡುವುದಾಗಿ ಸ್ವಾಮೀಜಿ ಆಮಿಷ ಒಡ್ಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ನಿವೇಶನ ಖರೀದಿಸಲು ಹಣ ಸಹಾಯ ಮಾಡುತ್ತೇನೆ. ಮನೆಗೆ ಬಂದರೆ ಹಣ ಕೊಡ್ತೀನಿ ಎಂದು ಸ್ವಾಮೀಜಿ ಮೊಬೈಲ್‌ನಲ್ಲಿ ನಡೆಸಿರುವ ಸಂಭಾಷಣೆಯನ್ನು ಮಹಿಳೆ ರಿಕಾರ್ಡ್ ಮಾಡಿಕೊಂಡಿದ್ದಾರೆ. ಹಣ ನೀಡದೆ ಸತಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಸ್ವಾಮೀಜಿ ಯತ್ನಿಸಿದ್ದಾರೆ. ಪ್ರತಿನಿತ್ಯ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆ ಎಂದು ಪೋಲಿಸರಿಗೆ ನೀಡಿದ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
‘ನನಗೆ ಕಿರುಕುಳ ನೀಡಿದ ಬಳಿಕ ನನ್ನ ವಿರುದ್ಧವೇ ಬ್ರಹ್ಮಾನಂದ ಸ್ವಾಮೀಜಿ ಹಾಗೂ ಅವರ ಪತ್ನಿ ನಿಂದನೆ ಮಾಡುತ್ತಿದ್ದಾರೆ. ನನ್ನ ಬಳಿ ಇರುವ ವಿಡಿಯೊ ಹಾಗೂ ಆಡಿಯೊ ಸಾಕ್ಷ್ಯಗಳನ್ನು ಪರಿಶೀಲಿಸಿ ನನಗೆ ನ್ಯಾಯ ದೊರಕಿಸಿ ಕೊಡಿ’ ಎಂದು ಸಂತ್ರಸ್ತ ಮಹಿಳೆ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.