ADVERTISEMENT

ಅಪ್ರತಿಮ ಹೋರಾಟಗಾರ ಶಿವಾಜಿ

ತಾಲ್ಲೂಕು ಕಚೇರಿಯಲ್ಲಿ 393ನೇ ಜಯಂತಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 20:15 IST
Last Updated 19 ಫೆಬ್ರುವರಿ 2020, 20:15 IST
ಕ್ಷತ್ರಿಯ ಮರಾಠ ಸಂಘದ ಮುಖಂಡರನ್ನು ಅಭಿನಂದಿಸಲಾಯಿತು
ಕ್ಷತ್ರಿಯ ಮರಾಠ ಸಂಘದ ಮುಖಂಡರನ್ನು ಅಭಿನಂದಿಸಲಾಯಿತು   

ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿ ಕಾರ್ಯಕ್ರಮ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.

ಡಿವೈಎಸ್‍ಪಿ ಟಿ.ರಂಗಪ್ಪ ಮಾತನಾಡಿ, ‘ಕ್ಷತ್ರಿಯರ ಅಭಿಮಾನದ ಸಂಕೇತವಾಗಿದ್ದ ಶಿವಾಜಿಗೆ ಆತನ ಸಾಮ್ರಾಜ್ಯದ ಕೇಂದ್ರ ಸ್ಥಾನವಾದ ರಾಯಘಡದಲ್ಲಿ ಛತ್ರಪತಿ ಕಿರೀಟ ತೊಡಿಸಿ ಕ್ಷತ್ರಿಯ ಕುಲದ ಸಿಂಹಾಸನಾಧೀಶ್ವರ ಛತ್ರಪತಿ ಶಿವಾಜಿ ಮಹಾರಾಜ ಎಂಬ ಬಿರುದು ನೀಡಲಾಯಿತು. ಹೋರಾಟದ ಹೆಸರಿಗೆ ಅನ್ವರ್ಥರಾಗಿದ್ದ ಚಕ್ರವರ್ತಿ ಶಿವಾಜಿ ದಕ್ಷಿಣ ಭಾಗಕ್ಕೆಲ್ಲ ತನ್ನ ಸಾಮ್ರಾಜ್ಯ ವಿಸ್ತರಿಸಿದ ಅಪ್ರತಿಮ ವೀರ’ ಎಂದರು.

ವಿರೋಧಿಗಳನ್ನು ಲೆಕ್ಕಿಸದೇ ಧೈರ್ಯ ಸಾಹಸ ಮೆರೆದ ಶಿವಾಜಿ ಸಂಸ್ಕೃತಿಯ ಪ್ರತೀಕ‌. ದೇಶದ ಅಖಂಡತೆಯನ್ನು ಎತ್ತಿ ಹಿಡಿದ ಶೂರ ಶಿವಾಜಿ, ಬಾಲ್ಯದಿಂದಲೂ ರೂಢಿಸಿಕೊಂಡು ಬಂದ ಸದ್ಗುಣಗಳು, ಆತ ಹೊಂದಿದ್ದ ಕೆಚ್ಚೆದೆ, ಧೈರ್ಯ, ಸಾಹಸ ಹಾಗೂ ಹೋರಾಟದ ಗುಣಗಳನ್ನು ಇಂದಿನ ನಮ್ಮ ಯುವ ಜನಾಂಗ ತಿಳಿದು, ಜೀವನದಲ್ಲಿ ರೂಢಿಸಿಕೊಳ್ಳುವುದು ಅಗತ್ಯ’ ಎಂದರು.

ADVERTISEMENT

ಈ ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕ್ಷತ್ರಿಯ ಮರಾಠ ಸಮುದಾಯದ ಹಿರಿಯ ಮುಖಂಡರಾದ ಲಕ್ಷ್ಮಣ್‌ರಾವ್ ಮೋಹಿತೆ, ಹನುಮಂತರಾವ್ ಚವ್ಹಾಣ್, ಈಶ್ವರ್ ರಾವ್ ಪವಾರ್ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕ್ಷತ್ರಿಯ ಮರಾಠ ಸಂಘಕ್ಕೆ ನಿವೇಶನ ಮಂಜೂರು ಮಾಡುವಂತೆ ಶಾಸಕರಿಗೆ ಸಂಘದ ಅಧ್ಯಕ್ಷ ಎಸ್.ಸುರೇಶ್‌ ರಾವ್‌ ಮಾನೆ ಹಾಗೂ ಪದಾಧಿಕಾರಿಗಳು ತಹಶೀಲ್ದಾರ್‌ಟಿ.ಎಸ್. ಶಿವರಾಜ್‌ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಎಚ್.ಕೆ.ಸೋಮಶೇಖರ್, ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ್ ನಾಯಕ್, ತಾಲ್ಲೂಕು ಕ್ಷತ್ರಿಯ ಮರಾಠ ಸಂಘದ ಅಧ್ಯಕ್ಷ ಸುರೇಶ್‌ ರಾವ್ ಮಾನೆ, ಪ್ರಧಾನ ಕಾರ್ಯದರ್ಶಿ ದಯಾನಂದರಾವ್ ಯಾದವ್, ಖಜಾಂಚಿ ವಿಠಲ್ ರಾವ್ ಮಾನೆ ಮುಖಂಡರಾದ ಎಚ್.ಪ್ರಕಾಶ್‌ರಾವ್, ಮಹದೇವರಾವ್ ಪವಾರ್, ಪುನೀತ್‌ರಾವ್ ಸಾಳಂಕೆ, ಶಿವಾಜಿರಾವ್‌ಪವರ್, ಮಂಜುನಾಥರಾವ್, ಭುಜಂಗರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.